Abhishek Ramdas: ಸದ್ಯಕ್ಕೆ ಸೀರಿಯಲ್ ಬೇಡ ಎಂದಿದ್ದ ನಟ ಅಭಿಷೇಕ್ ನಂದಗೋಕುಲ ಒಪ್ಪಿಕೊಂಡಿದ್ದಕ್ಕೆ ಕಾರಣವೇನು

Krishnaveni K

ಶನಿವಾರ, 24 ಮೇ 2025 (11:53 IST)
ಬೆಂಗಳೂರು: ಗಟ್ಟಿಮೇಳ ಧಾರವಾಹಿಯ ವಿಕ್ಕಿ ಪಾತ್ರದ ಮೂಲಕ ಜನ್ರಪಿಯರಾಗಿದ್ದ ಸ್ಯಾಂಡಲ್ ವುಡ್ ಯುವ ನಟ ಅಭಿಷೇಕ್ ರಾಮ್ ದಾಸ್ ಈಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸೀರಿಯಲ್ ಮಾಡಲ್ಲ ಎಂದಿದ್ದ ಅಭಿ ನಂದಗೋಕುಲ ಸೀರಿಯಲ್ ಒಪ್ಪಿಕೊಂಡಿದ್ದು  ಯಾಕೆ? ಅವರೇ ಪ್ರತಿಕ್ರಿಯಿಸಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೂನ್ 4 ರಿಂದ ಆರಂಭವಾಗಲಿರುವ ನಂದಗೋಕುಲ ಎನ್ನುವ ಸೀರಿಯಲ್ ಮೂಲಕ ಅಭಿ ಕಿರುತೆರೆಗೆ ವಾಪಸಾಗುತ್ತಿದ್ದಾರೆ. ಒಬ್ಬ ಶಿಸ್ತಿನ ಅಪ್ಪ ಮತ್ತು ಅವರ ಐವರು ಮಕ್ಕಳನ್ನೊಳಗೊಂಡ ಕತೆಯಿದು. ಇದರಲ್ಲಿ ಅಭಿ ಮೂರನೆಯ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ತುಂಟ, ಕಾಲೇಜು ಓದುವ ಹುಡುಗನ ಕ್ಯಾರೆಕ್ಟರ್ ಅವರದ್ದು.

ನಂದಗೋಕುಲ ಬೆಸ್ಟ್ ಟೀಂ, ಬೆಸ್ಟ್ ಪ್ರಾಜೆಕ್ಟ್
ಗಟ್ಟಿಮೇಳ ಬಳಿಕ ಸೀರಿಯಲ್ ಮಾಡಲ್ಲ ಎಂದುಕೊಂಡಿದ್ದೆ. ಆದರೆ ನನಗೆ ಇದ್ದ ಕಮಿಟ್ ಮೆಂಟ್ ಮತ್ತು ಸಮಯದಿಂದಾಗಿ ಮತ್ತೆ ಬರೋಣ ಎಂದುಕೊಂಡೆ. ಗಟ್ಟಿಮೇಳ ಆದ ಬಳಿಕ ಸಾಕಷ್ಟು ಸೀರಿಯಲ್ ಆಫರ್ ಬಂದಿತ್ತು. ಆದರೆ ಒಪ್ಪಿರಲಿಲ್ಲ. ಆದರೆ ಕಲರ್ಸ್ ಜೊತೆ ನನಗೆ ಉತ್ತಮ ಬಾಂಧವ್ಯವಿತ್ತು ಮತ್ತು ಈ ಸೀರಿಯಲ್ ಕತೆ ಮತ್ತು ಟೀಂ ಬೆಸ್ಟ್ ಎನಿಸಿತು. ಅದಕ್ಕೇ ಒಪ್ಪಿಕೊಂಡೆ. ತಿಂಗಳಲ್ಲಿ 15 ಸೀರಿಯಲ್ ಮಾಡಿದರೂ ಇನ್ನು 15 ದಿನ ಇರುತ್ತಲ್ಲ, ಆ ಸಮಯವನ್ನು ಸಿನಿಮಾಗೆ ಮೀಸಲಿಡಬಹುದು ಎನಿಸಿತು. ಈ ಸೀರಿಯಲ್ ನಲ್ಲಿ ಅಪ್ಪನೇ ಮುಖ್ಯ ಪಾತ್ರಧಾರಿ. ಸೀರಿಯಲ್ ಟೈಟಲ್ ಕೂಡಾ ಫ್ಯಾನ್ಸಿಯಾಗಿದೆ. ಯಶ್ ಸರ್, ರಾಧಿಕಾ ಪಂಡಿತ್ ಅವರಿಗೆ ಹೆಸರು ತಂದುಕೊಟ್ಟ ಸೀರಿಯಲ್ ಟೈಟಲ್ ಇದು.

ಸೀರಿಯಲ್ ವಾರದ ಮಧ್ಯದಿಂದ ಆರಂಭವಾಗುತ್ತಿರುವುದಕ್ಕೆ ಕಾರಣವೇನು
ನಂದಗೋಕುಲ ಸೀರಿಯಲ್ ಜೂನ್ 4 ಅಂದರೆ ಬುಧವಾರದಿಂದ ಆರಂಭವಾಗುತ್ತಿದೆ. ಸಾಮಾನ್ಯವಾಗಿ ಸೀರಿಯಲ್ ಗಳು ಸೋಮವಾರದಿಂದ ಆರಂಭವಾಗುತ್ತದೆ. ಈ ಸೀರಿಯಲ್ ಮೇ ನಲ್ಲೇ ಲಾಂಚ್ ಆಗಬೇಕಿತ್ತು. ಆದರೆ ಐಪಿಎಲ್ ನಿಂದಾಗಿ ಆಗಿರಲಿಲ್ಲ. ಐಪಿಎಲ್ ಮುಗಿದ ತಕ್ಷಣ ಈಗ ಲಾಂಚ್ ಆಗ್ತಿದೆ. ಅದು ಬಿಟ್ಟರೆ ವಾರದ ಮಧ್ಯೆ ಲಾಂಚ್ ಆಗುತ್ತಿರುವುದಕ್ಕೆ ಬೇರೆ ಕಾರಣಗಳೇನೂ ಇಲ್ಲ.

ಗಟ್ಟಿಮೇಳ ಫ್ಯಾನ್ಸ್ ರೆಸ್ಪಾನ್ಸ್ ಅದ್ಭುತ
ಮತ್ತೆ ಕಿರುತೆರೆಗೆ ಬರುತ್ತಿರುವುದಕ್ಕೆ ಗಟ್ಟಿಮೇಳ ಫ್ಯಾನ್ಸ್ ಸಾಕಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡ್ತಿದ್ದಾರೆ. ನೀವು ವಾಪಸ್ ಬರ್ತಿರೋದು ಖುಷಿಯಾಗ್ತಿದೆ ಎಂದು ಎಷ್ಟೋ ಜನ ಮೆಸೇಜ್ ಮಾಡ್ತಿದ್ದಾರೆ. ಅದನ್ನು ನೋಡಿದಾಗ ಖುಷಿಯಾಗುತ್ತದೆ.

ಸಿನಿಮಾದಲ್ಲೂ ಬ್ಯುಸಿ
ಕಿರುತೆರೆಯಲ್ಲಿ ನಂದಗೋಕುಲ ಸೀರಿಯಲ್ ಆಗಿದ್ದರೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ನಾನು ತಿಂಗಳು ಪೂರ್ತಿ ಕೆಲಸ ಮಾಡುತ್ತಿದ್ದೇನೆ. ಮೊನ್ನೆಯಷ್ಟೇ ರಂಗು ರಗಳೆ ಸಿನಿಮಾ ಮುಹೂರ್ತ ಆಗಿದೆ. ಲ್ಯಾಂಡ್ ಲಾರ್ಡ್ ಎನ್ನುವ ಸಿನಿಮಾ ಮುಂದೆ ಬಿಡುಗಡೆಯಾಗಬೇಕಿದೆ. ಇದರಲ್ಲಿ ದುನಿಯಾ ವಿಜಿ ಸರ್ ಅವರ ಎದುರು ನೆಗೆಟಿವ್ ಕ್ಯಾರೆಕ್ಟರ್ ಮಾಡ್ತಾ ಇದ್ದೇನೆ. ಇದಲ್ಲದೆ ನಾನೇ ಹೀರೋ ಆಗಿ ಮಾಡ್ತಿರೋದು ಕ್ರಿಸ್ಟಲ್ ಪ್ರೊಡಕ್ಷನ್ಸ್ ದು ಒಂದು ಮೂವಿ ರಿಲೀಸ್ ಗೆ ರೆಡಿಯಿದೆ.

ಎಷ್ಟೋ ಜನಕ್ಕೆ ಕ್ಯಾಮರಾ ಮುಂದೆ ಬರಲೂ ಅವಕಾಶ ಸಿಗಲ್ಲ. ಅವರನ್ನು ನೋಡಿದರೆ ನಾನು ಬ್ಲೆಸ್ಡ್ ಎನಿಸುತ್ತೆ. ನನಗೆ ಕೆಲಸವಿದೆ, ಅವಕಾಶಗಳು ಇದೆ. ಕಿರುತೆರೆ, ಹಿರಿತೆರೆ ಮ್ಯಾಟರ್ ಆಗಲ್ಲ. 15 ದಿನ ಸೀರಿಯಲ್ ಎಂದರೆ 15 ಸಿನಿಮಾ ಅಂತ ಪ್ರತೀ ದಿನವೂ ಡೇಟ್ಸ್ ಇದೆ. ಅದೇ ಖುಷಿ ನನಗೆ.

ಯುವ ಹೀರೋಗಳಿಗೆ ಕನ್ನಡದಲ್ಲಿ ಅವಕಾಶವಿಲ್ವಾ
ಮಲಯಾಳಂನಂತೆ ಕನ್ನಡ ಸಿನಿಮಾಗಳಲ್ಲಿ ಯುವ ಹೀರೋಗಳಿಗೆ ಹೂಡಿಕೆ ಮಾಡುವವರು ಬರ್ತಾ ಇಲ್ಲ. ಹೂಡಿಕೆ ಮಾಡುವವರಿದ್ದರೆ ಒಳ್ಳೆಯ ಕತೆ ಸಿಗ್ತಾ ಇಲ್ಲ. ನಾವೇ ಎಷ್ಟೋ ಕತೆ ಮಾಡಿಕೊಂಡಿರ್ತೇವೆ. ಆದರೆ ಹೂಡಿಕೆ ಮಾಡುವವರು ಸಿಗದೇ ನಮ್ಮಂತಹ ಎಷ್ಟೋ ಪ್ರತಿಭಾವಂತ ಯುವ ಕಲಾವಿದರಿಗೆ ಅವಕಾಶ ಸಿಗ್ತಾ ಇಲ್ಲ. ನಾವು ಸ್ನೇಹಿತರು ಸಿಕ್ಕಿದಾಗಲೂ ಮೊದಲು ಚರ್ಚೆ ಮಾಡುವುದೂ ಇದನ್ನೇ. ಹೂಡಿಕೆದಾರರು, ಒಳ್ಳೆ ಕತೆ ಸಿಕ್ಕರೆ ನಾವೂ ಮುಂದೆ ಬರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ