ಕರ್ನಾಟಕದಿಂದ ಕೂರ್ಗ್ ಪ್ರತ್ಯೇಕ ರಾಜ್ಯ ಸೃಷ್ಟಿಸಬೇಕು ಎಂಬ ಬಹುಕಾಲದ ಕೂಗಿಗೆ ಕೇಂದ್ರ ಸರಕಾರ ತಣ್ಣೀರು ಎರಚಿದೆ. ಹಲವು ರಾಜ್ಯಗಳನ್ನು ವಿಭಜಿಸಿ ಪುಟ್ಟ ರಾಜ್ಯಗಳನ್ನು ಅಸ್ತಿತ್ವಕ್ಕೆ ತರುವ ಸಂಬಂಧ ಯಾವ ರಾಜ್ಯವೂ ಇದುವರೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಹಾಗಾಗಿ ಸದ್ಯಕ್ಕೆ ಎರಡನೇ ರಾಜ್ಯಗಳ ಪುನರ್ ರಚನಾ ಆಯೋಗ ರಚಿಸುವ ಪ್ರಶ್ನೆಯಿಲ್ಲ ಎಂದು ಹೇಳಿದೆ.
ಈ ಹೊತ್ತಿನಲ್ಲಿ ರಾಜ್ಯಗಳ ಪುನರ್ ರಚನಾ ಆಯೋಗವನ್ನು ರಚಿಸುವುದನ್ನು ಕೇಂದ್ರ ಸರಕಾರ ಪರಿಗಣಿಸುವುದಿಲ್ಲ. ಹೊಸ ರಾಜ್ಯ ರಚನೆ ಸಂಬಂಧ ಯಾವುದೇ ರಾಜ್ಯ ಸರಕಾರದಿಂದ ನಾವು ಪ್ರಸ್ತಾವನೆಯನ್ನು ಸ್ವೀಕರಿಸಿಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಗುರುದಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ.
ಆಂಧ್ರಪ್ರದೇಶದಿಂದ ತೆಲಂಗಾಣ, ಮಹಾರಾಷ್ಟ್ರದಿಂದ ವಿದರ್ಭ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ಬಂದೇಲ್‌ಖಂಡ್ ರಾಜ್ಯಗಳನ್ನು ಸೃಷ್ಟಿಸಬೇಕು ಎಂದು ವೈಯಕ್ತಿಕ ಮತ್ತು ಸಂಘಟನೆಗಳಿಂದ ಬೇಡಿಕೆಗಳು ಮತ್ತು ಪ್ರಸ್ತಾವನೆಗಳು ಬರುತ್ತಿವೆ ಎಂದು ಸಚಿವರು ಲೋಕಸಭೆಗೆ ತಿಳಿಸಿದರು.
ಪ್ರಸಕ್ತ 28 ರಾಜ್ಯ ಹಾಗೂ ಏಳು ಕೇಂದ್ರಾಡಳಿತ ಪ್ರದೇಶಗಳನ್ನು ಭಾರತ ಹೊಂದಿದ್ದು, ಇವುಗಳಿಂದ ಇನ್ನಷ್ಟು ರಾಜ್ಯಗಳನ್ನು ಸೃಷ್ಟಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಇದರಲ್ಲಿ ಪ್ರಸಕ್ತ ಅತಿ ಹೆಚ್ಚು ಹೋರಾಟ ನಡೆಯುತ್ತಿರುವುದು ತೆಲಂಗಾಣಕ್ಕೆ.
ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಬಿಹಾರದಿಂದ ಭೋಜಪುರ್, ಗುಜರಾತಿನಿಂದ ಸೌರಾಷ್ಟ್ರ, ಕರ್ನಾಟಕದಿಂದ ಕೂರ್ಗ್, ಪಶ್ಚಿಮ ಒರಿಸ್ಸಾದಿಂದ ಕೋಶಲಾಂಚಲ, ಪಶ್ಚಿಮ ಬಂಗಾಲದಿಂದ ಗೂರ್ಖಾಲ್ಯಾಂಡ್, ಉತ್ತರ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲದಿಂದ ಮಿಥಿಲಾಂಚಲ ರಾಜ್ಯಗಳನ್ನು ರಚಿಸಬೇಕು ಎಂಬ ಬೇಡಿಕೆಗಳು ಕೂಡ ಇವೆ ಎಂದು ಸಚಿವರು ಮಾಹಿತಿ ನೀಡಿದರು.
ಎಲ್ಲಾ ಸಂಬಂಧಿತ ಅಂಶಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ ಹೊಸ ರಾಜ್ಯಗಳ ರಚನೆ ಸಂಬಂಧ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಸರಕಾರದ ನಿರ್ಧಾರವು ಜನರ ಒಮ್ಮತಾಭಿಪ್ರಾಯ ಮತ್ತು ಅಗತ್ಯಗಳನ್ನು ಅವಲಂಭಿಸಿರುತ್ತದೆ ಎಂದು ತಿಳಿಸಿದರು.