ಚುನಾವಣೆಗಳು ಭ್ರಷ್ಟಚಾರಕ್ಕೆ ದೊಡ್ಡ ಮೂಲವಾಗ್ತಿದೆ: ಆಯೋಗ

ಭಾನುವಾರ, 27 ಮಾರ್ಚ್ 2011 (14:50 IST)
ದೇಶದಲ್ಲಿನ ಚುನಾವಣೆಗಳು ಭ್ರಷ್ಟಾಚಾರಕ್ಕೆ ದೊಡ್ಡ ಮೂಲವಾಗುತ್ತಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಆತಂಕವ್ಯಕ್ತಪಡಿಸಿದ್ದು, ಆ ನಿಟ್ಟಿನಲ್ಲಿ ಅಧಿಕಾರದ ಗದ್ದುಗೆ ಏರಲು ಹಣಬಲ ಉಪಯೋಗಿಸುತ್ತಿರುವುದರ ವಿರುದ್ಧ ಹೋರಾಡಲು ಚುನಾವಣಾ ಆಯೋಗ ಮುಂದಾಗಿದೆ.

ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಅದರಲ್ಲಿಯೂ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ದಿನಂಪ್ರತಿ ಒಂದು ಕೋಟಿ ರೂಪಾಯಿಯಷ್ಟು ಹಣವನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಮೂಲವೊಂದು ತಿಳಿಸಿದೆ. ಏತನ್ಮಧ್ಯೆ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜಾರ್ಖಂಡ್‌ನ ಕನ್ವರ್ ದೀಪ್ ಸಿಂಗ್ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ಮಾಡಿದಾಗ 57 ಲಕ್ಷ ರೂಪಾಯಿ ನಗದು ಸಿಕ್ಕಿತ್ತು. ಆದರೆ ಈ ಹಣ ತನ್ನ ಕಂಪನಿಗೆ ಸೇರಿದ್ದು ಎಂದು ಸ್ಪಷ್ಟನೆ ನೀಡಿದ ನಂತರ ಸಿಂಗ್ ಅವರಿಗೆ ತೆರಳಲು ಅನುಮತಿ ನೀಡಲಾಗಿತ್ತು.

ಆದರೆ ಹಣದ ಮೂಲದ ಬಗ್ಗೆ ಸಂಸದ ಸಿಂಗ್ ವಿವರಣೆ ನೀಡಿದ್ದಾರೆ. ಹಾಗಂತ ಅದೇ ಸತ್ಯ ಎಂಬುದನ್ನು ನಂಬಲು ಸಾಧ್ಯವಿಲ್ಲ. ಯಾಕೆಂದರೆ ಅವರು ಚುನಾವಣೆ ನಡೆಯಲಿರುವ ಗುವಾಹಟಿ ರಾಜ್ಯಕ್ಕೆ ತೆರಳುತ್ತಿದ್ದಾರೆ ಎಂದು ಖುರೇಷಿ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿಯೂ ಪ್ರತಿಯೊಬ್ಬ ಅಭ್ಯರ್ಥಿಯೂ ಗೆಲ್ಲಲು ಹಣ ಬಲದ ಸ್ಪರ್ಧೆ ಏರ್ಪಟ್ಟಿದೆ. ಆ ನಿಟ್ಟಿನಲ್ಲಿ ಒಬ್ಬೊಬ್ಬ ಅಭ್ಯರ್ಥಿ ಸುಮಾರು ಎರಡು ಕೋಟಿಗೂ ಅಧಿಕ ಖರ್ಚು ಮಾಡುತ್ತಾರೆ. ಅದೇ ರೀತಿ ಅದಕ್ಕಿಂತ ದುಪ್ಪಟ್ಟು ಹಣ ಗಳಿಸಲು ಮುಂದಾಗುತ್ತಾರೆ ಎಂದು ದೂರಿದ್ದಾರೆ. ಆದರೆ ಪ್ರಸಕ್ತವಾಗಿ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಮತ ಖರೀದಿಗೆ ಹಣ ಕೊಟ್ಟ ಬಗ್ಗೆ ಚುನಾವಣಾ ಆಯೋಗಕ್ಕೆ ಯಾವುದೇ ದೂರು ಬಂದಿಲ್ಲ ಎಂದು ಅವರು ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ