10 ರೂ. ಆಮಿಷವೊಡ್ಡಿ ಅಪ್ರಾಪ್ತೆ ಮೇಲೆ ಅತ್ಯಾಚಾರ! ಮುಂದೇನಾಯ್ತು?
ಬುಧವಾರ, 3 ಆಗಸ್ಟ್ 2022 (10:32 IST)
ರಾಯ್ಪುರ : 10 ರೂ. ಆಮಿಷವೊಡ್ಡಿ 13 ವರ್ಷದ ಬಾಲಕಿಯ ಮೇಲೆ 76 ವರ್ಷ ವೃದ್ಧ ಮತ್ತು ಇನ್ನೊಬ್ಬ ಸೇರಿ ಅನೇಕ ಬಾರಿ ಅತ್ಯಾಚಾರವೆಸಗಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಛತ್ತೀಸ್ಗಢದ ಬಲೋದಬಜಾರ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಯ ಮೇಲೆ ಅತ್ಯಾಚಾರ ಶನಿವಾರ ನಡೆದಿದ್ದು, ನೆರೆ ಮನೆಯ ಮಹಿಳೆ ಈ ಕುರಿತು ಬಾಲಕಿ ಪೋಷಕರನ್ನು ಎಚ್ಚರಿಸಿದ ನಂತರ ಬೆಳಕಿಗೆ ಬಂದಿದೆ.
ಪೋಷಕರಿಬ್ಬರು ರ್ಯಾಗ್ಪಿಕರ್ಸ್ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ. ವಿಷಯ ತಿಳಿದ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಲೋದಬಜಾರ್ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ(ಎಸ್ಎಚ್ಒ) ಯದುಮಣಿ ಸಿದರ್ ಈ ಕುರಿತು ಮಾಹಿತಿ ನೀಡಿದ್ದು, ಪೋಷಕರು ನೀಡಿದ ದೂರಿನ ಆಧಾರದ ಮೇಲೆ ನಾವು ಆರೋಪಿಗಳಾದ ಕುಂಜ್ರಾಮ್ ವರ್ಮಾ(76) ಮತ್ತು ರಮೇಶ್ ವರ್ಮಾ(47)ನನ್ನು ನಾವು ಬಂಧಿಸಿದ್ದೇವೆ ಎಂದಿದ್ದಾರೆ.
ದೂರಿನ ಪ್ರಕಾರ, ಬಾಲಕಿ ವಾಸಿಸುವ ಅದೇ ಸ್ಥಳದಲ್ಲಿಯೇ ಕುಂಜ್ರಾಮ್ ಇದ್ದ. ಈ ವೇಳೆ ಬಾಲಕಿಯನ್ನು ನೋಡಿದ ಆತ ಪ್ರತಿ ಬಾರಿ 10 ರೂ. ನೀಡುವುದಾಗಿ ಆಮಿಷವೊಡ್ಡಿ ತನ್ನ ಮನೆಗೆ ಕರೆದು ಅತ್ಯಾಚಾರ ಮಾಡುತ್ತಿದ್ದ. ಕುಂಜ್ರಾಮ್ಗೆ ಪರಿಚಿತರಾಗಿರುವ ರಮೇಶ್ ಕೂಡ 10 ರೂ. ಆಮಿಷವೊಡ್ಡಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಾರಂಭಿಸಿದ್ದ ಎಂದು ವಿವರಿಸಿದ್ದಾರೆ.