ಮಾಡೆಲ್ ಹೇರ್‌ಸ್ಟೈಲ್ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ !
ಗುರುವಾರ, 18 ಮೇ 2023 (09:23 IST)
ನವದೆಹಲಿ : ಮಾಡೆಲ್ ಒಬ್ಬರ ಹೇರ್ಸ್ಟೈಲ್ನ್ನು ವಿರೂಪಗೊಳಿಸಿದ್ದಕ್ಕಾಗಿ ಆಕೆಗೆ 2 ಕೋಟಿ ರೂ. ಪರಿಹಾರ ನೀಡುವಂತೆ ಐಟಿಸಿ ಸಲೂನ್ ವಿರುದ್ಧ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.
ಎನ್ಸಿಡಿಆರ್ಸಿ ಆದೇಶವನ್ನು ಪ್ರಶ್ನಿಸಿ ಐಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಪರಿಹಾರವನ್ನು ಸುಮ್ಮನೆ ಕೇಳುವುದಲ್ಲ, ಅದಕ್ಕೆ ಸೂಕ್ತವಾದ ಕಾರಣ ಹಾಗೂ ಸಾಕ್ಷ್ಯ ಇರಬೇಕು ಎಂದು ಪೀಠ ಹೇಳಿದೆ. ಬಳಿಕ ಮಾಡೆಲ್ ಆಶ್ನಾ ರಾಯ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ 2 ಕೋಟಿ ರೂ. ಪರಿಹಾರ ನೀಡುವಂತೆ 2021ರ ಸೆ. 21 ರಂದು ಗ್ರಾಹಕರ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಫೆಬ್ರವರಿಯಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ರದ್ದುಗೊಳಿಸಿತ್ತು.
ಅಲ್ಲದೆ ಮಾದರಿಯಲ್ಲಿ ಸಲ್ಲಿಸಿದ ವಸ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮುಂದುವರೆಯುವಂತೆ ಗ್ರಾಹಕರ ನ್ಯಾಯಾಲಯಕ್ಕೆ ಸೂಚಿಸಿತ್ತು. ಪರಿಶೀಲನೆ ನಡೆಸಿದ್ದ ಗ್ರಾಹಕರ ನ್ಯಾಯಾಲಯ ಹಿಂದಿನ ತೀರ್ಪನ್ನು ಎತ್ತಿ ಹಿಡಿದಿತ್ತು.
ಏನಿದು ಪ್ರಕರಣ?
2018ರ ಏ.12 ರಂದು ನವದೆಹಲಿಯ ಹೋಟೆಲ್ ಐಐಟಿ ಮೌರ್ಯದಲ್ಲಿರುವ ಸಲೂನ್ಗೆ ಹೇರ್ ಕಟಿಂಗ್ಗಾಗಿ ಆಶ್ನಾ ರಾಯ್ ತೆರಳಿದ್ದರು. ಯಾವಾಗಲೂ ಕೇಶ ವಿನ್ಯಾಸ ಮಾಡುತ್ತಿದ್ದ ಕೇಶ ವಿನ್ಯಾಸಕಿ ಸಿಗದ ಕಾರಣ ಬೇರೊಬ್ಬ ವ್ಯಕ್ತಿಗೆ ಆ ಕೆಲಸವನ್ನು ವಹಿಸಲಾಗಿತ್ತು. ಆತ ಮಾಡಿದ್ದ ಕಟಿಂಗ್ ಸರಿಯಾಗಿಲ್ಲ. ವಿರೂಪಗೊಳಿಸಿದ್ದಾನೆ ಎಂದು ಮಾಡೆಲ್ ಆರೋಪಿಸಿದ್ದರು. ಅಲ್ಲದೆ ಇದರಿಂದಾಗಿ ಮುಜುಗರ ಎದುರಿಸಬೇಕಾಯಿತು.