ಮುತ್ತಿನ ನಗರಿ ಹೈದರಾಬಾದ್‌ನ ನಾನಕ್ ರಾಮಗುಡ ಎಂಬಲ್ಲಿ ನಿರ್ಮಾಣ ಹಂತದ 6 ಮಹಡಿಯ ಕಟ್ಟಡ ಕುಸಿದು ಕನಿಷ್ಠ 10 ಮಂದಿ ಕೂಲಿ ಕಾರ್ಮಿಕರು ದುರ್ಮರಣವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ 9.30ರ ಸುಮಾರಿಗೆ ದುರ್ಘಟನೆ ನಡೆದಿದೆ.
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿ ಒಟ್ಟು 14 ಕುಟುಂಬಗಳು ಅದೇ ಕಟ್ಟಡದ ನೆಲ ಮಹಡಿಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 9.30ಕ್ಕೆ ಕಟ್ಟಡ ಬಹುದೊಡ್ಡ ಶಬ್ಧದೊಂದಿದೆ ನೆಲಕ್ಕುರುಳಿತು ಎಂದು ತಿಳಿದು ಬಂದಿದೆ.
ತಕ್ಷಣ ಮಾಹಿತಿ ಪಡೆದ ಸೈಬರಾಬಾದ್ ಪೊಲೀಸರು ಮತ್ತು ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಕಟ್ಟಡದಡಿ ಸಿಲುಕಿದ್ದ 10 ಮಂದಿಯನ್ನು ರಕ್ಷಿಸಲಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಟ್ಟಡದಡಿ ಒಟ್ಟು ಎಷ್ಟು ಮಂದಿ ಇದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.