ಹದಿಹರೆಯದ ಯುವತಿಯನ್ನು ಅಪಹರಿಸಿ ಗ್ಯಾಂಗ್‌ರೇಪ್ ಎಸಗಿದ ಕಾಮುಕರು

ಬುಧವಾರ, 29 ನವೆಂಬರ್ 2023 (12:54 IST)
ಮನೆಗೆ ಮರಳುತ್ತಿರುವಾಗ ಹದಿಹರೆಯದ ಯುವತಿಯನ್ನು ಆರೋಪಿಗಳು ಒತ್ತಾಯಪೂರ್ವಕವಾಗಿ ಅಟೋದಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿ, ನಂತರ ಹತ್ಯೆಮಾಡಿ ಪರಾರಿಯಾದ ಹೇಯ ಘಟನೆ ವರದಿಯಾಗಿದೆ.  ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಕಾರ್ಯಕ್ರಮಗಳನ್ನು ವೀಕ್ಷಿಸಿ ತಾಯಿ ಮತ್ತು ಸಹೋದರನೊಂದಿಗೆ ಮನೆಗೆ ಮರಳುತ್ತಿದ್ದ ಹದಿಹರೆಯದ ಯುವತಿಯನ್ನು ಅಪಹರಿಸಿ, ಐವರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿ ದಾರುಣವಾಗಿ ಹತ್ಯೆಗೈದ ಘಟನೆ ನವದೆಹಲಿ-ಹರಿಯಾಣಾ ಗಡಿಯಲ್ಲಿ ನಡೆದಿದೆ.
 
ಹದಿಹರೆಯದ ಯುವತಿ ಮೇಲೆ ಗ್ಯಾಂಗ್‌ರೇಪ್ ಎಸಗಿದ ಐವರು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಪ್ರಕರಣ  ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಬಾಲಕಿಯ ಜೊತೆಯಲ್ಲಿದ್ದ ಆಕೆಯ ತಾಯಿ ಮತ್ತು ಸಹೋದರ ಆರೋಪಿಗಳನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹದಿಹರೆಯದ ಯುವತಿಯ ಸಂಬಂಧಿಕರು ಪೊಲೀಸ್ ಠಾಣೆಗೆ ಕರೆ ಮಾಡಿ ಅಪಹರಣದ ಮಾಹಿತಿ ನೀಡಿದ್ದಾರೆ.
 
ಗ್ಯಾಂಗ್‌ರೇಪ್ ಎಸಗಿದ ಆರೋಪಿಯನ್ನು ಮೊದಲಿಗೆ ಬಂಧಿಸಲಾಯಿತು.ತಾನು ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡ ಆರೋಪಿ,  ರೇಪ್ ಮಾಡಿದ ಸ್ಥಳವನ್ನು ತೋರಿಸಿದ್ದಲ್ಲದೇ ಆಕೆಯ ಮೃತದೇಹದ ಬಗ್ಗೆಯೂ ಮಾಹಿತಿ ನೀಡಿದ್ದಾನೆ.
 
ಆರೋಪಿ ನೀಡಿದ ಮಾಹಿತಿ ಮೇರೆಗೆ ಇತರ ಆರೋಪಿಗಳಾದ ನಿತಿನ್, ದೀಪಕ್ ಮತ್ತು ಕರಣ್ ಎನ್ನುವವರನ್ನು ಬಂಧಿಸಲಾಗಿದ್ದು ಎಲ್ಲಾ ಆರೋಪಿಗಳು ಅಟೋಚಾಲಕರಾಗಿದ್ದಾರೆ.ಒಬ್ಬ ಮಾತ್ರ ಅಪ್ರಾಪ್ತನಾಗಿದ್ದಾನೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ