ಏಕನಾಥ್ ಖಾಡ್ಸೆ ಪ್ರಕರಣದ ತನಿಖೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯಿಲಿ: ಆಪ್

ಮಂಗಳವಾರ, 7 ಜೂನ್ 2016 (12:35 IST)
ಮಹಾರಾಷ್ಟ್ರದ ಕಂದಾಯ ಖಾತೆ ಸಚಿವರಾಗಿದ್ದ ಏಕನಾಥ್ ಖಾಡ್ಸೆ ವಿರುದ್ಧದ ಆರೋಪಗಳ ಬಗ್ಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
 
ಖಾಡ್ಸೆಯವರ ರಾಜೀನಾಮೆಯಿಂದ ನಮಗೆ ಸಂತೋಷವಾಗಿಲ್ಲ. ಖಾಡ್ಸೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಇಬ್ಬರು ಬಿಜೆಪಿ ನಾಯಕರು ಅವರೊಂದಿಗೆ ಉಪಸ್ಥಿತರಿರುವುದು ನೋಡಿದಲ್ಲಿ ಬಿಜೆಪಿ ಅವರನ್ನು ರಕ್ಷಿಸಲು ಯತ್ನಿಸುತ್ತಿದೆ ಎನ್ನುವ ಸತ್ಯ ಬಹಿರಂಗವಾಗಿದೆ ಎಂದು ಆಪ್ ನಾಯಕ ಅಶುತೋಷ್ ಖೇತಾನ್ ಹೇಳಿದ್ದಾರೆ.  
 
ಖಾಡ್ಸೆ ವಿರುದ್ಧದ ಮೂರು ಆರೋಪಗಳ ಬಗ್ಗೆ ಸರಕಾರ ಯಾಕೆ ಎಫ್‌ಐಆರ್ ದಾಖಲಿಸಿಲ್ಲ. ಮೂರು ಕೇಸ್‌ಗಳಲ್ಲಿ ಎಫ್‌‍ಐಆರ್ ದಾಖಲಿಸಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಮಾಜಿ ಸಚಿವ ಖಾಡ್ಸೆಯವರನ್ನು ಬಿಜೆಪಿ ರಕ್ಷಿಸುತ್ತಿದೆ ಎನ್ನುವ ಅನುಮಾನ ಪ್ರತಿಯೊಬ್ಬರನ್ನು ಕಾಡುತ್ತಿದೆ. ಕೂಡಲೇ ಖಾಡ್ಸೆಯನ್ನು ಜೈಲಿಗೆ ತಳ್ಳಿ ಅವರ ವಿರುದ್ಧದ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಹೇಳಿದ್ದಾರೆ. 
 
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯ ನಂತರ ಎರಡನೇ ಪ್ರಭಾವಶಾಲಿ ನಾಯಕರಾಗಿದ್ದ ಖಾಡ್ಸೆ ಇಂತಹ ಭ್ರಷ್ಚಾಚಾರಗಳನ್ನು ಎಸಗುತ್ತಾರೆ ಎಂದರೆ ಮಹಾರಾಷ್ಟ್ರ ಸರಕಾರ ಯಾವ ರೀತಿ ನಡೆಯುತ್ತಿದೆ ಎನ್ನುವುದನ್ನು ಉಹಿಸಬಹುದಾಗಿದೆ ಎಂದು ಆಪ್ ನಾಯಕ ಅಶುತೋಷ್ ಖೇತಾನ್ ಗುಡುಗಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ