ನವದೆಹಲಿ : ಹೈದರಾಬಾದ್ನ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದೇಹವನ್ನು ಸುಟ್ಟು ಹಾಕಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಉದ್ದೇಶ ಪೂರ್ವಕವಾಗಿ ಎನ್ಕೌಂಟರ್ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಆಯೋಗ ತಿಳಿಸಿದೆ.
ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸುಪ್ರೀಂ ನ್ಯಾ. ವಿ.ಎಸ್.ಸಿರ್ಪುಕರ್, ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾ. ರೇಖಾ ಬಲ್ಡೋಟಾ ಮತ್ತು ಸಿಬಿಐನ ಮಾಜಿ ನಿರ್ದೇಶಕ ಡಾ. ಕಾರ್ತಿಕೇಯನ್ ಅವರಿದ್ದ ಆಯೋಗ ತನ್ನ ವರದಿಯನ್ನು ಸುಪ್ರೀಂಗೆ ಸಲ್ಲಿಸಿದೆ.
ಉದ್ದೇಶ ಪೂರ್ವಕವಾಗಿ ಪೊಲೀಸರು ಆರೋಪಿಗಳನ್ನು ಎನ್ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ. ನಾಲ್ವರಲ್ಲಿ ಮೂವರು ಅಪ್ರಾಪ್ತರು. ಸಂಬಂಧಿತ ಸಮಯದಲ್ಲಿ ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂಟಾ ಚೆನ್ನಕೇಶವುಲು ಅವರು ಅಪ್ರಾಪ್ತರಾಗಿದ್ದರು. ಈ ಹಿನ್ನೆಲೆಯಲ್ಲಿ 10 ಪೊಲೀಸ್ ಅಧಿಕಾರಿಗಳನ್ನು ಕೊಲೆ ಆರೋಪದ ಅಡಿ ವಿಚಾರಣೆಗೆ ಒಳಪಡಿಸಬೇಕು ಎಂದು ತಿಳಿಸಿದೆ.
ಮೃತರು 2019 ಡಿಸೆಂಬರ್ 6ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವುದು, ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಪೊಲೀಸರ ಮೇಲೆ ಹಲ್ಲೆ ಮತ್ತು ಗುಂಡು ಹಾರಿಸುವುದು ಮುಂತಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ ಎಂದು ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.