WFI ವಿವಾದ: ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ ಗಾಂಧಿ

ಬುಧವಾರ, 27 ಡಿಸೆಂಬರ್ 2023 (10:41 IST)
Photo Courtesy: Twitter
ಹರ್ಯಾಣ: ಭಾರತೀಯ ಕುಸ್ತಿ ಪ್ರಾಧಿಕಾರವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದ ಬೆನ್ನಲ್ಲೇ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕುಸ್ತಿಪಟುಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ.

ಬಜರಂಗ್ ಪೂನಿಯಾ ಸೇರಿದಂತೆ ಕುಸ್ತಿಪಟುಗಳು ಅಭ್ಯಾಸ ನಡೆಸುತ್ತಿದ್ದ ಸ್ಥಳಕ್ಕೇ ಇಂದು ಬೆಳ್ಳಂ ಬೆಳಿಗ್ಗೆ ರಾಹುಲ್ ಗಾಂಧಿ ಏಕಾಏಕಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಡಬ್ಲ್ಯುಎಫ್ ಐ ಮುಖ್ಯಸ್ಥರಾಗಿದ್ದ ಬಿಜೆಪಿ ಸಂದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಖ್ಯಾತ ಕುಸ್ತಿಪಟುಗಳು ಕಳೆದ ಕೆಲವು ಸಮಯದಿಂದ ಪ್ರತಿಭಟನೆ ಮಾಡುತ್ತಲೇ ಇದ್ದರು. ಈ ವಿಚಾರ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ. ಇತ್ತೀಚೆಗೆ ಡಬ್ಲ್ಯುಎಫ್ ಐಗೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕುಸ್ತಿಪಟುಗಳು ತಮಗೆ ಸಿಕ್ಕ ಪ್ರಶಸ್ತಿ ವಾಪಸ್ ಮಾಡುವ ಅಭಿಯಾನ ಆರಂಭಿಸಿದ್ದಾರೆ. ಈ ನಡುವೆ ಕೇಂದ್ರ ಕ್ರೀಡಾ ಸಚಿವಾಲಯ ನಿಯಮಬಾಹಿರವಾಗಿದೆ ಎಂಬ ಕಾರಣಕ್ಕೆ ಹೊಸದಾಗಿ ನೇಮಕವಾಗಿದ್ದ ಕುಸ್ತಿ ಪ್ರಾಧಿಕಾರವನ್ನೇ ಅಮಾನತು ಮಾಡಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಬಜರಂಗ್ ಪೂನಿಯಾ, ದೀಪಕ್ ಪೂನಿಯಾ ಮುಂತಾದ ತಾರೆಯರು ಕುಸ್ತಿ ಅಭ್ಯಾಸ ನಡೆಸುವ ಅಖಾಡಕ್ಕೆ ರಾಹುಲ್ ಗಾಂಧಿ ಇಂದು ಭೇಟಿ ನೀಡಿದ್ದಾರೆ. ಯಾವುದೇ ಮುನ್ಸೂಚನೆಯಿಲ್ಲದೇ ರಾಹುಲ್ ಭೇಟಿ ನೀಡಿದ್ದಾಗಿ ಕುಸ್ತಿಪಟುಗಳು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ