ಬಾಲಸೋರ್ : ಒಡಿಶಾದ ಕರಾವಳಿ ತೀರ ಬಾಲಸೋರ್ನಿಂದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಶನಿವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ.
ಅಗ್ನಿ-ಪಿ (ಪ್ರೈಮ್) ಹೊಸ ತಲೆಮಾರಿನ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯಾಗಿದ್ದು, ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಉಡಾವಣೆ ಮಾಡಲಾಯಿತು.
ಅತ್ಯಾಧುನಿಕ ಅಗ್ನಿ ದರ್ಜೆಯ ಕ್ಷಿಪಣಿ ಪ್ರಭೇದದ ಹೊಸ ಪೀಳಿಗೆಯ ಕ್ಷಿಪಣಿಯು 1,000 ದಿಂದ 2,000 ಕಿಮೀ ದೂರದ ವ್ಯಾಪ್ತಿಯವರೆಗೆ ಕ್ರಮಿಸುವ ಸಾಮರ್ಥ್ಯವಿದೆ. ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆಯ ಸಂದರ್ಭದಲ್ಲಿ ಅದಕ್ಕೆ ಅನೇಕ ಹೊಸ ಫೀಚರ್ಗಳನ್ನು ಅಳವಡಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದು ಅಗ್ನಿ ಪ್ರೈಮ್ ಕ್ಷಿಪಣಿಯ ಎರಡನೇ ಪರೀಕ್ಷಾರ್ಥ ಪ್ರಯೋಗವಾಗಿದೆ. ಕ್ಷಿಪಣಿಯ ಚಲನೆಯನ್ನು ಪರಿಶೀಲಿಸಲು ಹಾಗೂ ನಿಗಾ ವಹಿಸಲು ಪೂರ್ವ ಕರಾವಳಿಯ ಉದ್ದಕ್ಕೂ ವಿವಿಧ ದೂರಸ್ಥಮಾಪಕ ಮತ್ತು ರೇಡಾರ್ ಸ್ಟೇಷನ್ಗಳನ್ನು ಅಳವಡಿಸಲಾಗಿದೆ.
ಅತ್ಯಧಿಕ ಮಟ್ಟದ ನಿಖರತೆಯೊಂದಿಗೆ ಕ್ಷಿಪಣಿ ಪರೀಕ್ಷೆಯು ತನ್ನ ಎಲ್ಲಾ ಯೋಜನಾ ಧ್ಯೇಯೋದ್ದೇಶಗಳನ್ನು ಈಡೇರಿಸಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.