ಕಟಕ್: ಒಡಿಶಾದ ಕಟಕ್ ನಗರದಲ್ಲಿ ವಿವಿಧ ಸಂದರ್ಭಗಳಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯೊಬ್ಬನನ್ನು ಕಟಕ್‌ನ ಲೈಂಗಿಕ ಅಪರಾಧಗಳಿಂದ ಮಕ್ಕಳ ವಿಶೇಷ ರಕ್ಷಣೆ (ಪೋಕ್ಸೊ) ನ್ಯಾಯಾಲಯ ಗುರುವಾರ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿ ಬುಧಿಯಾ ಬಿಧಾನಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಲ್ಲದೆ, ನ್ಯಾಯಾಲಯ ಆತನಿಗೆ ₹60,000ದಂಡ ಪಾವತಿಸಲು ವಿಫಲವಾದಲ್ಲಿ ಇನ್ನೂ ಎರಡು ವರ್ಷ ಜೈಲಿನಲ್ಲಿ ಇರುವಂತೆ ಕೋರ್ಟ್ ಸೂಚಿಸಿದೆ.
ವಿಶೇಷ ಪೋಕ್ಸೊ ನ್ಯಾಯಾಲಯವು ಸಂತ್ರಸ್ತ ಬಾಲಕಿಯರಿಗೆ ತಲಾ ₹4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್‌ಎಸ್‌ಎ) ಸೂಚಿಸಿದೆ.
ಬುಧಿಯಾ ಬಿಧಾನಿ ಅವರು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಬಾಲಕಿಯರನ್ನು ವಿವಿಧ ಸಂದರ್ಭಗಳಲ್ಲಿ ಕಟಕ್ ಸಿಟಿಯ ಸೆಕ್ಟರ್-13 ಪ್ರದೇಶದ ಹೊಲಕ್ಕೆ ಕರೆದೊಯ್ದು ಸೆಪ್ಟೆಂಬರ್, 2022 ರಲ್ಲಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಸಂತ್ರಸ್ತೆಯ ಒಬ್ಬರ ಪೋಷಕರು ತಮ್ಮ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದ ನಂತರ ಬಿಧಾನಿ ವಿರುದ್ಧ ಪ್ರಕರಣ ದಾಖಲಿಸಿದಾಗ ಮಾತ್ರ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಆತನ ವಿರುದ್ಧ ಇದೇ ರೀತಿಯ ಎರಡು ಪ್ರಕರಣಗಳು ದಾಖಲಾಗಿದ್ದವು.