ಬುಲಂದ್‌ಶಹರ್ ಅತ್ಯಾಚಾರ ಪೀಡಿತರಿಗೆ 3 ಲಕ್ಷ ಪರಿಹಾರ, ಫ್ಲಾಟ್ ಘೋಷಿಸಿದ ಅಖಿಲೇಶ್

ಶುಕ್ರವಾರ, 5 ಆಗಸ್ಟ್ 2016 (12:02 IST)
ದೇಶವನ್ನೇ ಬೆಚ್ಚಿ ಬೀಳಿಸಿದ ಬುಲಂದ್‌ಶಹರ್ ಸಾಮೂಹಿಕ ಅತ್ಯಾಚಾರದ ಬಲಿಪಶು ತಾಯಿ- ಮಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ 3 ಲಕ್ಷ ಧನ ಮತ್ತು ತಲಾ ಒಂದು ಫ್ಲಾಟ್‌ನ್ನು ಪರಿಹಾರವಾಗಿ ನೀಡಿದ್ದಾರೆ.

ಪ್ರಕರಣವನ್ನು ರಾಜಕೀಕರಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿರುವ ಅಖಿಲೇಶ್,  ಘಟನೆ ದುರದೃಷ್ಟಕರ, ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಮೂವರನ್ನು ಬಂಧಿಸಲಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ತಲೆಮರೆಸಿಕೊಂಡಿರುವ ಗ್ಯಾಂಗ್ ಲೀಡರ್ ಸಲೀಮ್ ಬವ್ರಿಯಾನನ್ನು ಇನ್ನುವರೆಗೂ ಬಂಧಿಸಿಲ್ಲ.

ಶುಕ್ರವಾರ ರಾತ್ರಿ ನೊಯ್ಡಾದಿಂದ ಶಹಜಹಾರ್ಪುರದ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದನ್ನು ಅಡ್ಡಗಟ್ಟಿದ್ದ ದರೋಡೆಕೋರರ ಗುಂಪೊಂದು ಅದರಲ್ಲಿದ್ದ ಗಂಡಸರನ್ನು ಕಟ್ಟಿ ಹಾಕಿ 35 ವರ್ಷದ ಮಹಿಳೆ ಮತ್ತು ಆಕೆಯ 14 ವರ್ಷದ ಮಗಳನ್ನು ಎಳೆದೊಯ್ದು ಸಮೀಪದ ಹೊಲದಲ್ಲಿ ಸಾಮೂಹಿಕ ಅತ್ಯಾಚಾರಗೈದಿದ್ದರು. ಘಟನೆ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ