ಅಮರ್ ಸಿಂಗ್ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ: ಅಖಿಲೇಶ್‌ಗೆ ತಂದೆ ಪ್ರಶ್ನೆ
ಸೋಮವಾರ, 24 ಅಕ್ಟೋಬರ್ 2016 (13:02 IST)
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದು ಮುಲಾಯಂ ಸಿಂಗ್ ಯಾದವ್ ತಮ್ಮ ಸಹೋದರ ಮತ್ತು ಅಮರ್ ಸಿಂಗ್ ಪರ ನಿಂತಿದ್ದಾರೆ. ಅಮರ್ ಸಿಂಗ್ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿದೆಯಾ ಎಂದು ಮಗ ಅಖಿಲೇಶ್ ಯಾದವ್‌ಗೆ ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ಅಮರ್ ಸಿಂಗ್ ಇಲ್ಲದಿದ್ದರೆ ನಾನು ಜೈಲು ಸೇರುತ್ತಿದ್ದೆ. ನನ್ನನ್ನು ರಕ್ಷಿಸಿದ ಸಿಂಗ್ ಬಗ್ಗೆ ನೀನು ಮಾತನಾಡುತ್ತೀಯಾ? ಆತ ನನ್ನ ಸಹೋದರನಿದ್ದಂತೆ ಎಂದು ಮುಲಾಯಂ ಸಿಂಗ್ ಯಾದವ್ ಬಹಿರಂಗವಾಗಿಯೇ ತಮ್ಮ ಪುತ್ರನ ವಿರುದ್ಧ ಹರಿಹಾಯ್ದಿದ್ದಾರೆ.
ಪವರ್ ಬ್ರೋಕರ್ ಎಂದು ಹೆಸರು ಮಾಡಿರುವ ಅಮರ್ ಸಿಂಗ್ ಮತ್ತೆ ಪಕ್ಷಕ್ಕೆ ಮರಳಿರುವುದು ಅಖಿಲೇಶ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಅವರಿಂದಾಗಿಯೇ ಎಲ್ಲ ಭಿನ್ನಮತ, ಗೊಂದಲ ಸೃಷ್ಟಿಯಾಗಿದೆ. ಅವರನ್ನು ಮತ್ತೆ ಏಕೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕಿತ್ತು ಎಂದವರು ಪ್ರಶ್ನಿಸುತ್ತಿದ್ದಾರೆ.
ಬದಲಾವಣೆ ತರುವವರನ್ನು ಮುಂದಕ್ಕೆ ಕರೆದುಕೊಂಡು ಬಂದೆ. ಅಧಿಕಾರ ಸಿಗುತ್ತಲೇ ನಿಮ್ಮ ತಲೆ ಕೆಟ್ಟು ಹೋಗಿದೆ. ಜೈಲಿಗೆ ಹೋಗದವರು, ಲಾಠಿ ರುಚಿ ತಿನ್ನದಿದ್ದವರು ಈಗ ಕೂಗಾಡುತ್ತಿದ್ದಾರೆ. ಕೆಲ ನಾಯಕರಿಗೆ ಮೂಗು ತೂರಿಸುವದಷ್ಟೇ ಕೆಲಸ. ಕಿರುಚಾಡೋರನ್ನ ಪಕ್ಷದಿಂದ ಹೊರಕ್ಕೆ ಹಾಕ್ತಿನಿ ಎಂದು ಮುಲಾಯಂ ಗುಡುಗಿದ್ದು, ಎಲ್ಲೂ ಕೂಡ ಮಗನ ಹೆಸರನ್ನು ಪ್ರಸ್ತಾಪಿಸದೇ ಮಗ ಪಕ್ಷ ಬಿಟ್ಟು ಹೋದರೂ ಚಿಂತೆ ಇಲ್ಲ ಎನ್ನುವ ಇಂಗಿತವನ್ನು ಹೊರಹಾಕಿದ್ದಾರೆ.
ಪಕ್ಷ ಕಟ್ಟುವಾಗ ನಾನು ಸಹೋದರನ ಜತೆಗಿದ್ದೆ. ತುರ್ತು ಪರಿಸ್ಥಿತಿಯಲ್ಲಿ ಮುಲಾಯಂ ಜೈಲಿಗೆ ಹೋದಾಗ ನಾನು ಪಕ್ಷವನ್ನು ನಿಭಾಯಿಸಿದ್ದೇನೆ. ಆದರೆ ನನ್ನಿಂದ ಅಧಿಕಾರವನ್ನು ಕಸಿಯಲಾಯ್ತು. ನನ್ನದೇನು ತಪ್ಪಿತ್ತು, ಇದೆಲ್ಲ ನನಗೆ ದುಃಖ ತಂದಿದೆ ಎಂದು ಮುಲಾಯಂ ಸಹೋದರ ಶಿವಪಾಲ್ ಸಿಂಗ್ ತಮ್ಮ ನೋವನ್ನು ಹೊರಹಾಕಿದ್ದಾರೆ.
ಗಂಗಾಜಲ ಮುಟ್ಟಿ ಪ್ರಮಾಣ ಮಾಡುತ್ತೇನೆ ಅಖಿಲೇಶ್ ಯಾದವ್ ಹೊಸ ಪಕ್ಷ ಕಟ್ಟಲು, ವಿರೋಧಪಕ್ಷದವರ ಜತೆ ಮೈತ್ರಿ ಮಾಡಿಕೊಳ್ಳಲು ತಯಾರಾಗಿದ್ದರು ಎಂದು ಗುಡುಗಿರುವ ಶಿವಪಾಲ್, ಪಕ್ಷವನ್ನು ಉಳಿಸಿಕೊಳ್ಳಲು ಯಾವ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ.
ಅಮರ್ ಸಿಂಗ್ ಪರವೂ ವಾದಿಸಿದ ಮುಲಾಯಂ, ಸಿಂಗ್ ಇಲ್ಲದಿದ್ದರೆ ನಾನು ಜೈಲು ಸೇರುತ್ತಿದ್ದೆ. ನನ್ನನ್ನು ರಕ್ಷಿಸಿದ ಅವರ ಬಗ್ಗೆ ನೀನು ಮಾತನಾಡುತ್ತೀಯಾ? ಆತ ನನ್ನ ಸಹೋದರನಿದ್ದಂತೆ ಎಂದು ಬಹಿರಂಗವಾಗಿಯೇ ತಮ್ಮ ಪುತ್ರನ ವಿರುದ್ಧ ಹರಿಹಾಯ್ದಿದ್ದಾರೆ.
ಇತ್ತ ತನ್ನ ತಂದೆಯನ್ನು ಬಿಟ್ಟುಕೊಡದ ಪರಿಸ್ಥಿತಿ ಅಖಿಲೇಶ್‌ಗೆ ಸೃಷ್ಟಿಯಾಗಿದೆ. ನಾನು ತಂದೆಯ ಪರವಾಗಿಯೇ ಇರುತ್ತೇನೆ. 25 ವರ್ಷಗಳನ್ನು ಪೂರೈಸಿರುವ ಪಕ್ಷವನ್ನು ಒಡೆದು ಈಗ ಹೊಸ ಪಕ್ಷವನ್ನು ಏಕೆ ಕಟ್ಟಲಿ. ಹೊಸ ಪಕ್ಷವನ್ನು ಕಟ್ಟುವ ಯೋಚನೆಯನ್ನು ಮಾಡಿಯೇ ಇಲ್ಲ. ಪಕ್ಷದಲ್ಲಿ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಮುಲಾಯಂ ಕೇಳಿದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಎಂದೋ ರಾಜೀನಾಮೆ ನೀಡುತ್ತಿದ್ದೆ. ಹೊಸ ಪಕ್ಷ ಕಟ್ಟುವುದು ವದಂತಿ. ಮುಲಾಯಂ ನನ್ನ ತಂದೆ ಅಷ್ಟೇ ಅಲ್ಲ ಗುರು ಸಹ ಭಾವುಕರಾಗಿ ಹೇಳಿದ್ದಾರೆ ಅವರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.