ಅಮರನಾಥ್ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಮಾಸುವ ಮುನ್ನವೇ ಉಗ್ರರು ಮತ್ತಷ್ಟು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಉತ್ತರಪ್ರದೇಶ ಮತ್ತು ಗುಜರಾತ್ ಮಹಿಳಾ ಯಾತ್ರಿಕರು ಉಗ್ರರ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಭಯೋತ್ಪಾದಕರು ಮತ್ತಷ್ಟು ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು, ಗೃಹ ಸಚಿವಾಲಯಕ್ಕೆ ಮಾಹಿತಿ ರವಾನಿಸಿದ್ದಾರೆ.
ನಿನ್ನೆ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಮಂದಿ ಯಾತ್ರಿಕರು ಹತ್ಯೆಯಾಗಿದ್ದು 14 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹತ್ಯೆಯಾದವರಲ್ಲಿ ಐವರು ಗುಜರಾತ್ ರಾಜ್ಯಕ್ಕೆ ಸೇರಿದವರಾಗಿದ್ದರೆ ಇಬ್ಬರು ಮಹಾರಾಷ್ಟ್ರ ಮೂಲದವರಾಗಿದ್ದಾರೆ.
ಉಗ್ರರ ದಾಳಿಯಲ್ಲಿ ಹತ್ಯೆಯಾದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಘೋಷಿಸಿದ್ದಾರೆ.
ಅಮರನಾಥ್ ಯಾತ್ರೆಗೆ ಭಾರಿ ಸೇನಾ ಬಂದೋಬಸ್ತ್ ವಹಿಸಲಾಗಿದ್ದರೂ ಉಗ್ರರ ಉಪಟಳ ನಿರಂತರವಾಗಿ ಮುಂದುವರಿದಿದೆ. ಉಗ್ರರನ್ನು ಸದೆಬಡೆಯಲು ಕೇಂದ್ರ ಗೃಹ ಸಚಿವಾಲಯ ಇಂದು ನಡೆದ ಸಭೆಯಲ್ಲಿ ಐದು ಪ್ರಮುಖ ರಣತಂತ್ರಗಳನ್ನು ರೂಪಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.