ವಿಜಯವಾಡ: ಆಂಧ್ರಪ್ರದೇಶದಲ್ಲಿ ಇಂದು ಸಿಎಂ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ವೇದಿಕೆಯಲ್ಲೇ ತಮಿಳುನಾಡಿನ ಬಿಜೆಪಿ ನಾಯಕಿ, ಮಾಜಿ ರಾಜ್ಯ ಪಾಲೆ ತಮಿಳ್ ಸಾಯಿ ಸೌಂದರರಾಜನ್ ಮೇಲೆ ಗರಂ ಆದ ಘಟನೆ ನಡೆದಿದೆ.
ಚಂದ್ರಬಾಬು ನಾಯ್ಡು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಎಲ್ಲಾ ಘಟಾನುಘಟಿ ನಾಯಕರೂ ಪಾಲ್ಗೊಂಡಿದ್ದರು. ಎಲ್ಲರನ್ನೂ ವೇದಿಕೆಯ ಮೇಲೆ ಕೂರಿಸಲಾಗಿತ್ತು. ಈ ವೇಳೆ ಅಲ್ಲಿಗೆ ತಮಿಳ್ ಸಾಯಿ ಆಗಮಿಸಿ ಎಲ್ಲಾ ನಾಯಕರಿಗೂ ವಂದಿಸುತ್ತಿದ್ದರು.
ಈ ವೇಳೆ ತಮಿಳ್ ಸಾಯಿ ಅವರನ್ನು ಪಕ್ಕಕ್ಕೆ ಕರೆದ ಅಮಿತ್ ಶಾ ವೇದಿಕೆಯಲ್ಲೇ ಖಡಕ್ ಆಗಿ ಏನೋ ಮಾತನಾಡಿದ್ದಾರೆ. ಇದನ್ನು ಅಲ್ಲಗಳೆಯುವ ಯತ್ನ ಮಾಡಿದ ತಮಿಳ್ ಸಾಯಿಗೆ ಇಲ್ಲ.. ಇಲ್ಲ ಎನ್ನುವಂತೆ ಕೈ ಸನ್ನೆ ಮಾಡಿ ಖಡಕ್ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಆದರೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಸೋಲಿಗೆ ಪಕ್ಷದೊಳಗಿನ ಸಂಘರ್ಷವೂ ಕಾರಣ ಎನ್ನಲಾಗಿತ್ತು. ಅಣ್ಣಾಮಲೈ ಮತ್ತು ತಮಿಳ್ ಸಾಯಿ ಎರಡು ಬಣಗಳಾಗಿವೆ. ಈ ಇಬ್ಬರ ನಡುವಿನ ಸಂಘರ್ಷವೇ ತಮಿಳುನಾಡು ಬಿಜೆಪಿಯಲ್ಲಿ ಒಳಗಜಗಳಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅಮಿತ್ ಶಾ ಕ್ಲಾಸ್ ತೆಗೆದುಕೊಂಡಿರಬಹುದು ಎನ್ನಲಾಗಿದೆ. ಆದರೆ ಇದನ್ನೇ ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳು ಟೀಕಿಸಿದ್ದು, ತಮಗಿಂತ ವಯಸ್ಸಿನಲ್ಲಿ ಹಿರಿಯೆ ಎನ್ನುವುದನ್ನೂ ನೋಡದೇ ಅಮಿತ್ ಶಾ ವೇದಿಕೆಯಲ್ಲೇ ತಮಿಳ್ ಸಾಯಿ ಮಾನಹಾನಿ ಮಾಡಿದ್ದಾರೆ ಎಂದಿವೆ.