ಫೇಸ್‌ಬುಕ್ ಗೆಳೆತನದಿಂದ 21 ಲಕ್ಷ ರೂ.ಕಳೆದುಕೊಂಡ ವೃದ್ಧೆ

ಬುಧವಾರ, 22 ನವೆಂಬರ್ 2023 (12:42 IST)
ಫೇಸ್‌ಬುಕ್ ಸ್ನೇಹ, ಪ್ರೀತಿ ಕೊಲೆಯಲ್ಲಿ ಅಂತ್ಯವಾದ ಉದಾಹರಣೆಗಳಿವೆ. ಫೇಸ್‌ಬುಕ್‌ನಿಂದ ಹಣ ಕಳೆದುಕೊಂಡವರಿಗೆ ಏನೂ ಬರವಿಲ್ಲ. ಅದಕ್ಕೊಂದು ತಾಜಾ ಉದಾಹರಣೆ 76 ವರ್ಷದ ಈ ವೃದ್ಧೆ
 
ಫೇಸ್‌ಬುಕ್, ಫೇಸ್‌ಬುಕ್, ಫೇಸ್‌ಬುಕ್... ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು 100ರ ಅಂಚಿನಲ್ಲಿರುವ ವೃದ್ಧರಿಗೂ ಈ ಮಾಯೆ ಸುತ್ತಿಕೊಂಡು ಬಿಟ್ಟಿದೆ. ಈ ಲೋಕಪ್ರಿಯ ಸಾಮಾಜಿಕ ಜಾಲತಾಣ ದಿನೇ ದಿನೇ ಜನಪ್ರಿಯವಾಗುತ್ತಿದ್ದಂತೆ, ಇದರಿಂದ ಹುಟ್ಟಿಕೊಳ್ಳುತ್ತಿರುವ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. 
 
ಫೇಸ್‌ಬುಕ್ ಗೀಳು ಹತ್ತಿಸಿಕೊಂಡ ವೃದ್ಧೆಗೆ ತಾನು ಲಂಡನ್ ನಿವಾಸಿ ಎಂದು ಹೇಳಿಕೊಂಡಿರುವ ಡೇನಿಯಲ್ ಎಂಬ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ನಾನು ಭಾರತಕ್ಕೆ ಬಂದಾಗ ನಿಮ್ಮನ್ನು ಭೇಟಿಯಾಗುತ್ತೇನೆ ಎಂದೆಲ್ಲ ಆತ ಚಾಟ್ ಮಾಡಿದ್ದ. 
 
ಕಳೆದ ಆಗಸ್ಟ್ 19 ರಂದು ವೃದ್ಧೆಗೆ ಕರೆ ಮಾಡಿದ ಮಹಿಳೆಯೊಬ್ಬರು ಡೇನಿಯಲ್ ನಿಮ್ಮ  ದೂರವಾಣಿ ನಂಬರ್ ನೀಡಿದ್ದಾನೆ. ಆತ ಲಂಡನ್‌ನಿಂದ ಬರುವಾಗ ತಂದಿದ್ದ ಲಗೇಜು ಮತ್ತು 25 ಸಾವಿರ ಅಮೇರಿಕನ್ ಡಾಲರ್ ಹಣವನ್ನು ಸೀಮಾಸುಂಕದವರು  ವಶಪಡಿಸಿಕೊಂಡಿದ್ದಾರೆ ಇದನ್ನು ಬಿಡಿಸಿಕೊಳ್ಳಲು 62 ಸಾವಿರ ರೂಪಾಯಿ ಬೇಕು.  ಅಧಿಕಾರಿಗಳು  ಲಗೇಜು ಹಿಂತಿರುಗಿಸಿದ ನಂತರ ನಿಮ್ಮ ಹಣವನ್ನು ಹಿಂತಿರುಗಿಸುತ್ತೇವೆ ಎಂದು ಹೇಳಿದ್ದಾಳೆ. ಇದನ್ನು ನಂಬಿದ ವೃದ್ಧೆ ಡೇನಿಯಲ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಾಳೆ. 
 
ವೃದ್ಧೆ ಸುಲಭವಾಗಿ ಮೋಸವಾಗಿದ್ದರಿಂದ ಪ್ರೇರಣೆ ಪಡೆದ ಮಹಿಳೆ ಮತ್ತೆ ಮತ್ತೆ ಹತ್ತಾರು ಬಾರಿ ಕರೆ ಮಾಡಿ ಬೇರೆ ಬೇರೆ ಖಾತೆಗಳಿಗೆ ಒಟ್ಟು  21 ಲಕ್ಷ ರೂಪಾಯಿಗಳನ್ನು ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. 
 
ತನ್ನ ಹಣದ ಜತೆ ಡೇನಿಯಲ್ ಬರುತ್ತಾನೆ ಎಂದು ಕಾದು ಕಾದು ಸುಸ್ತಾದ ವೃದ್ಧೆ ಹಣ ಹಾಕಿಸಿಕೊಂಡ ಮಹಿಳೆ ಮತ್ತು ಡೇನಿಯಲ್ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಅವೆರಡು ಸ್ವಿಚ್ಡ್ ಆಫ್ ಆಗಿದ್ದವು. ಆತನ ಫೇಸ್‌ಬುಕ್ ಖಾತೆ ಸಹ ನಾಪತ್ತೆಯಾಗಿತ್ತು.
 
ಕಷ್ಟಕಾಲಕ್ಕೆ ಬರಲಿ ಎಂದು  ಆಸ್ತಿ ಮಾರಿದ ಹಣವನ್ನು ಬ್ಯಾಂಕ್‌ನಲ್ಲಿಟ್ಟು, ಅದರಿಂದ ಬರುತ್ತಿದ್ದ ಬಡ್ಡಿಯಿಂದ ಜೀವನ ನಡೆಸುತ್ತಿದ್ದ ವೃದ್ಧೆ ತನಗಾದ ಮೋಸದಿಂದ ಕಂಗಾಲಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ