ಮುಖ್ಯಮಂತ್ರಿ ಹುದ್ದೆಯಿಂದ ತಮಗೆ ಕೊಕ್ ನೀಡಿ ಮತ್ತೊಬ್ಬರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನುವ ವರದಿಗಳು ಆಧಾರರಹಿತ ಹಾಗೂ ಕಪೋಲ ಕಲ್ಪಿತ ಎಂದು ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಹೇಳಿದ್ದಾರೆ.
ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಿಎಂ ಆನಂದಿಬೆನ್ ಪಟೇಲ್, ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸಚಿವ ನಿತೀನ್ ಪಟೇಲ್ ದೆಹಲಿಗೆ ಭೇಟಿ ನೀಡಿರುವುದರಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆಯಾಗಲಿದೆ ಎಂದು ಮಾಧ್ಯಮಗಳು ತಪ್ಪು ಮಾಹಿತಿ ಹರಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದೋರ್‌ನಲ್ಲಿ ಧಾರ್ಮಿಕ ಗುರು ಭಯ್ಯಾ ಮಹಾರಾಜ್ ಅವರನ್ನು ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಆನಂದಿಬೆನ್ ಪಟೇಲ್, ಪ್ರಸ್ತುತ ನಾನು ಇಲ್ಲಿದ್ದೇನೆ. ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದರು.
ನನ್ನ ಮತ್ತು ಆರೋಗ್ಯ ಖಾತೆ ಸಚಿವ ನಿತಿನ್ ಪಟೇಲ್‌ರ ದೆಹಲಿ ಭೇಟಿಯನ್ನು ಲಿಂಕ್ ಮಾಡಲಾಗುತ್ತಿದೆ. ನಾನು ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲು ದೆಹಲಿಗೆ ತೆರಳಿದ್ದೆ. ನಿತಿನ್ ಪಟೇಲ್ ನೀಟ್ ಪರೀಕ್ಷಾ ವಿಷಯವಾಗಿ ಚರ್ಚಿಸಲು ದೆಹಲಿಗೆ ತೆರಳಿದ್ದರು ಎಂದು ಗುಜರಾತ್ ಸಿಎಂ ಆನಂದಿ ಬೆನ್ ಪಟೇಲ್ ತಿಳಿಸಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.