ಕ್ರಿಕೆಟ್ ಮೇನಿಯಾ; ತೀರ್ಪು ಬದಲಿಸಲಿಲ್ಲವೆಂದು ಅಂಪೈರ್ ಸಹೋದರಿ ಹತ್ಯೆ

ಬುಧವಾರ, 1 ಜೂನ್ 2016 (11:09 IST)
ಕ್ರಿಕೆಟ್ ಪಂದ್ಯಾವಳಿ ವೇಳೆ ಅಂಪೈರ್ ತನ್ನ ತೀರ್ಪು ಬದಲಿಸಲಿಲ್ಲವೆಂದು ಆತನ ಸಹೋದರಿಯನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಳೆದ ಮೇ 28 ರಂದು ಈ ಘಟನೆ ನಡೆದಿದೆ.

 
ಐಪಿಎಲ್ ಖ್ಯಾತಿ ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಕ್ರಿಕೆಟ್ ಲೀಗ್ ಆಯೋಜಿಸಲು ಉತ್ತೇಜನ ನೀಡಿದೆ. ಈ ಟ್ರೆಂಡ್ ಅನುಸರಿಸಿ ಉತ್ತರ ಪ್ರದೇಶದ ಅಲಿಗಢನಲ್ಲಿರುವ ಜರಾರಾ ನಗರದಲ್ಲೂ ಕ್ರಿಕೆಟ್ ಲೀಗ್‌ನ್ನು ಆಯೋಜಿಸಲಾಗಿತ್ತು. ಜರಾರಾ ಪ್ರೀಮಿಯರ್ ಲೀಗ್ ಎಂಬ ಹೆಸರಿನ ಪಂದ್ಯಾವಳಿಯಲ್ಲಿ ಅಂಪೈರ್ ರಾಜ್ ಕುಮಾರ್ ನೀಡಿದ ತೀರ್ಪು ಈ ಮಟ್ಟದಲ್ಲಿ ಅನಾಹುತವನ್ನು ಸೃಷ್ಟಿಸುತ್ತದೆ ಎಂದು ಅಲ್ಲಿದ್ದವರು ಯಾರು ಕೂಡ ಊಹಿಸಿರಲಿಕ್ಕಿಲ್ಲ. 
 
ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಮೇ 28 ರಂದು ಜರಾರಾ ಮತ್ತು ಬರಿಕಿ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಪಂದ್ಯ ನಿರ್ಣಾಯಕ ಹಂತದಲ್ಲಿದ್ದಾಗ  ಬೌಲರ್ ಎಸೆದ ಚೆಂಡೊಂದಕ್ಕೆ ಅಂಪೈರ್ ನೋಬಾಲ್ ಎಂದು ತೀರ್ಪು ನೀಡಿದ್ದಾರೆ. ಬೌಲ್ ಮಾಡುತ್ತಿದ್ದ ತಂಡದ ಸದಸ್ಯ ಸಂದಿಪ್ ಪಾಲ್ ತನ್ನ ತೀರ್ಪನ್ನು ಬದಲಿಸುವಂತೆ ಅಂಪೈರ್ ಬಳಿ ಕದನಕ್ಕಿಳಿದಿದ್ದಾನೆ. ಆದರೆ ಅವರು ತಮ್ಮ ತೀರ್ಮಾನವನ್ನು ಬದಲಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಪಾಲ್ ಅಂಪೈರ್ ರಾಜಕುಮಾರ್‌ನನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ. ಆದರೆ ಆತನ ಸೇಡಿಗೆ ಬಲಿಯಾಗಿದ್ದು ಮಾತ್ರ ಅಂಪೈರ್ ಸಹೋದರಿ. 
 
ಮರುದಿನ ಪಾಲ್ ಅಂಪೈರ್ ರಾಜ್ ಕುಮಾರ್ ಸಹೋದರಿ ಪೂಜಾ ಮತ್ತು ಆಕೆಯ ಮೂರು ಜನ ಸ್ನೇಹಿತೆಯರನ್ನು ಭೇಟಿಯಾಗಿದ್ದಾನೆ. ಮೊದಲಿನಿಂದಲೂ ಪರಿಚಿತನಾಗಿದ್ದ ಆತ ಕುಡಿಯಲು ತಂಪು ಪಾನೀಯ ನೀಡಿದಾಗ ಪೂಜಾ ಮತ್ತು ಆಕೆಯ ಸ್ನೇಹಿತರು ನಿರಾಕರಿಸಲಿಲ್ಲ. ಆದರೆ ಪಾಲ್ ಮೂವರಿಗೂ ತಂಪು ಪಾನೀಯದಲ್ಲಿ ವಿಷ ಬೆರಸಿ ಕೊಟ್ಟಿದ್ದಾನೆ. ಅದನ್ನು ಕುಡಿದ ಪೂಜಾ ತಕ್ಷಣ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಆಕೆಯ ಸ್ನೇಹಿತೆಯರು ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. 
 
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ