ಸಹರ್ಸಾ: ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಕಿರುಸೇತುವೆ ಕುಸಿದುಬಿದ್ದಿದ್ದು, ಈ ಮೂಲಕ ಮೂರು ವಾರಗಳ ಅಂತರದಲ್ಲಿ ನಡೆದ 13ನೇ ದುರ್ಘಟನೆ ಇದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ (ಸಹರ್ಸಾ) ಜ್ಯೋತಿ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿ, ಕುಸಿತಗೊಂಡಿದ್ದು ಕಿರು ಸೇತುವೆಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸೇತುವೆ ಸುತ್ತಮುತ್ತಲಿನ ಹಳ್ಳಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ ಎಂದರು.
ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಸೇತುವೆ ಕುಸಿತದ ಸರಣಿ ಘಟನೆಗಳು ಸಂಭವಿಸಿದ್ದು, ಬಿಹಾರ ಸರ್ಕಾರ 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ.
ರಾಜ್ಯದಲ್ಲಿ ಪದೇ ಪದೇ ಸೇತುವೆ ಕುಸಿತ ಪ್ರಕರಣ ನಡೆಸುತ್ತಿರುವುದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ, ತಕ್ಷಣ ದುರಸ್ತಿ ಮಾಡಬೇಕಾದ ಸೇತುವೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಕಳೆದ ವಾರ ಸೂಚನೆ ನೀಡಿದ್ದರು.