ಮೋದಿಗೆ ವಯಸ್ಸಾಯ್ತು, ಮುಂದಿನ ವರ್ಷ ನಿವೃತ್ತಿಯಾಗುತ್ತಾರಾ? ಅರವಿಂದ್ ಕೇಜ್ರಿವಾಲ್ ಟಾಂಗ್

Krishnaveni K

ಶನಿವಾರ, 11 ಮೇ 2024 (15:01 IST)
ನವದೆಹಲಿ: ಜೈಲಿನಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೊದಲ ಪತ್ರಿಕಾಗೋಷ್ಠಿಯಲ್ಲೇ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಮೊನ್ನೆಯಷ್ಟೇ ಕೇಜ್ರಿವಾಲ್ ಗೆ ಜೂನ್ 2 ರವರೆಗೆ ಮಧ‍್ಯಂತರ ಜಾಮೀನು ನೀಡಿ ಕೋರ್ಟ್ ಬಿಡುಗಡೆ ಮಾಡಿತ್ತು. ಚುನಾವಣೆ ದೃಷ್ಟಿಯಿಂದ ಸದ್ಯಕ್ಕೆ ಅವರನ್ನು ಬಿಡುಗಡೆ ಮಾಡಲಾಗಿದೆ. ಜೂನ್ 2 ರ ನಂತರ ಅವರು ಮತ್ತೆ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ ನಡುವೆ ಜೈಲಿನಿಂದ ಹೊರಬಂದ ಬೆನ್ನಲ್ಲೇ ಪತ್ನಿ ಜೊತೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ ಕೇಜ್ರಿವಾಲ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ನಮ್ಮ ಎಎಪಿ ಪಕ್ಷವನ್ನು ತುಳಿಯಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದಿದ್ದಾರೆ.

‘ಮೋದಿಗೆ ಈ ವರ್ಷ ಸೆಪ್ಟೆಂಬರ್ ಗೆ 75 ವರ್ಷವಾಗುತ್ತದೆ. ತಮ್ಮ ಪಕ್ಷದಲ್ಲಿ 75 ವರ್ಷ ಮೀರಿದವರು ಅಧಿಕಾರದಲ್ಲಿರಬಾರದು ಎಂದು ಅವರೇ ನಿಯಮ ಮಾಡಿಕೊಂಡಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಎಲ್ಲರೂ ನಿವೃತ್ತರಾಗಿದ್ದಾರೆ. ಹಾಗಿದ್ದರೆ ಮೋದಿ ಕೂಡಾ ನಿವೃತ್ತಿಯಾಗಬೇಕು’ ಎಂದಿದ್ದಾರೆ.

‘ಒಂದು ವೇಳೆ ಮೋದಿ ತಾವು ಮಾಡಿದ ನಿಯಮವನ್ನು ಪಾಲಿಸಿ ನಿವೃತ್ತಿಯಾಗುತ್ತಾರೆಂದರೆ ಮೋದಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಹಾಗಿದ್ದರೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಯಾರು? ಹಾಗಿದ್ದಲ್ಲಿ ಮೋದಿ ಉತ್ತರಾಧಿಕಾರಿಯಾಗಿ ಯೋಗಿ ಆದಿತ್ಯನಾಥ್ ಅಥವಾ ಅಮಿತ್ ಶಾ ಬರಬಹುದು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಗ್ಯಾರಂಟಿಯನ್ನು ಯೋಗಿ, ಅಮಿತ್ ಶಾ ಪೂರ್ಣಗೊಳಿಸಬಹುದೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ