ಗುರ್ಗಾಂವ್: ಬೆಂಗಳೂರಿನಲ್ಲಿ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ತಾಯಿ, ಸಹೋದರನನ್ನು ಬೆಂಗಳೂರು ಪೊಲೀಸರು ಇಂದು ಬಂಧಿಸಿದ್ದಾರೆ.
ಪತ್ನಿ ನಿಖಿತಾ ಮತ್ತು ಆಕೆಯ ಮನೆಯವರು ವರದಕ್ಷಿಣೆ ಕಿರುಕುಳ ಸೇರಿದಂತೆ ಮಹಿಳಾ ಪರ ಇರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಇನ್ನಿಲ್ಲದ ಕಾಟ ಕೊಡುತ್ತಿದ್ದರು. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾವಿಗೆ ಮುನ್ನ ಅತುಲ್ ಡೆತ್ ನೋಟ್ ಬರೆದಿಟ್ಟಿದ್ದ.
ಈ ವಿಚಾರ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಅತುಲ್ ನಂತಹ ಹಲವು ಪುರುಷರು ಮಹಿಳೆಯರಿಂದಲೂ ಕಿರುಕುಳ ಅನಭವಿಸುತ್ತಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು ಎಂದು ಹಲವರು ಅಭಿಯಾನವನ್ನೇ ಶುರು ಮಾಡಿದ್ದರು. ಈ ಹಿನ್ನಲೆಯಲ್ಲಿ ಅತುಲ್ ಪತ್ನಿ ಮನೆಯವರ ವಿರುದ್ಧ ಬೆಂಗಳೂರು ಪೊಲೀಸರು ದೂರು ದಾಖಲಿಸಿದ್ದರು.
ಈ ಸಂಬಂಧ ನಗರ ಪೊಲೀಸರು ಉತ್ತರ ಪ್ರದೇಶದ ನಿಖಿತಾ ಮನೆಗೆ ತೆರಳಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಆದರೆ ಅವರು ನಾಪತ್ತೆಯಾಗಿದ್ದರು. ಇಂದು ನಿಖಿತಾಳನ್ನು ಹರ್ಯಾಣದಲ್ಲಿ ಮತ್ತು ಆಕೆಯ ತಾಯಿ ಮತ್ತು ಸಹೋದರನನ್ನು ಲಕ್ನೋದಲ್ಲಿ ಬಂಧಿಸಿದ್ದಾರೆ. ಇದೀಗ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.