ಜೈಪುರ: ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕಿ ಅತುಲ್ ಸುಭಾಷ್ ಮಾದರಿಯಲ್ಲೇ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ರಾಜಸ್ಥಾನದ ಜೋಧ್ ಪುರದಲ್ಲಿ ಹೋಮಿಯೋ ವೈದ್ಯನಾಗಿದ್ದ ಅಜಯ್ ಕುಮಾರ್ ಜತೋಲಿಯಾ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಮುನ್ನ ಡೆತ್ ನೋಟ್ ಬರೆದಿದ್ದ ಅಜಯ್ ತನ್ನ ಸಾವಿಗೆ ಪತ್ನಿಯ ಕಿರುಕುಳವೇ ಕಾರಣ ಎಂದು ಬರೆದಿದ್ದಾನೆ.
ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ವ್ಯಕ್ತಿ ಪತ್ನಿ ಹಾಗೂ ಮನೆಯವರಿಂದ ವರದಕ್ಷಿಣೆ ಕಿರುಕುಳ ಆರೋಪದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಈ ಘಟನೆ ಬಳಿಕ ಪುರುಷರಿಗೂ ವಿಚ್ಛೇದನ ಸಂದರ್ಭದಲ್ಲಿ ಆಗುವ ಮಾನಸಿಕ ಹಿಂಸೆಯಿಂದ ಮುಕ್ತಿ ನೀಡಬೇಕು ಎಂದು ರಾಷ್ಟ್ರದಾದ್ಯಂತ ಹೋರಾಟಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ರಾಜಸ್ಥಾನದಲ್ಲೂ ಇಂತಹದ್ದೇ ಪ್ರಕರಣ ನಡೆದಿರುವುದು ವಿಪರ್ಯಾಸ.
ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದ ಅಜಯ್ ತಮ್ಮದೇ ಕ್ಲಿನಿಕ್ ಕೂಡಾ ನಡೆಸುತ್ತಿದ್ದಾರೆ. ಇದೀಗ ಕ್ಲಿನಿಕ್ ನಲ್ಲೇ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಹೋದ್ಯೋಗಿಯೊಬ್ಬರು ಅವರನ್ನು ಭೇಟಿ ಮಾಡಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.