ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ!
ಸೋಮವಾರ, 8 ನವೆಂಬರ್ 2021 (14:56 IST)
ಭೂಪಾಲ್ : ಗಂಡ-ಹೆಂಡತಿಯ ನಡುವೆ ನಡೆದ ಒಂದು ಸಣ್ಣ ಜಗಳದಿಂದ ಒಂದು ಜೀವವೇ ಹೋಗಿದೆ.
ಅಷ್ಟಕ್ಕೂ ಈ ಜಗಳ ನಡೆದಿದ್ದು ಟವೆಲ್ ಸಲುವಾಗಿ ಎಂದರೆ ಆಶ್ಚರ್ಯವಾಗದಿರದು. ಸ್ನಾನಕ್ಕೆ ಹೋದ ಗಂಡನಿಗೆ ಆತನ ಹೆಂಡತಿ ಟವೆಲ್ ಕೊಡುವುದು ತಡವಾಯಿತು ಎಂಬ ಕಾರಣಕ್ಕೆ ಆತ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.
ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ವ್ಯಕ್ತಿ ಸ್ನಾನಕ್ಕೆ ಹೋದಾಗ ತನ್ನ ಹೆಂಡತಿಯನ್ನು ಕರೆದು ಟವೆಲ್ ಕೊಡಲು ಹೇಳಿದ್ದ. ಆದರೆ, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಳು. ಆತನ ಸ್ನಾನ ಮುಗಿದರೂ ಆಕೆ ಟವೆಲ್ ಕೊಡದಿದ್ದರಿಂದ ಕೋಪಗೊಂಡ ಗಂಡ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿ, ಅರಣ್ಯ ಇಲಾಖೆಯ ದಿನಗೂಲಿ ನೌಕರ ರಾಜಕುಮಾರ್ ಬಹೆ (50) ತನ್ನ ಪತ್ನಿ ಪುಷ್ಪಾ ಬಾಯಿ (45)ಯನ್ನು ಕೊಲೆ ಮಾಡಿದ್ದಾನೆ. ಆತ ಸ್ನಾನದ ನಂತರ ಟವೆಲ್ ನೀಡುವಂತೆ ಕೇಳಿದ್ದ. ಆದರೆ, ಆಕೆ ಟವೆಲ್ ನೀಡಲು ತಡವಾಗಿದ್ದಕ್ಕೆ ಈ ಕೊಲೆ ಮಾಡಿದ್ದಾನೆ ಎಂದು ಎಂದು ಕಿರ್ನಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಂದ್ರ ಕುಮಾರ್ ಬರಿಯಾ ತಿಳಿಸಿದ್ದಾರೆ.
ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದುದರಿಂದ ಸ್ವಲ್ಪ ಸಮಯ ಕಾಯುವಂತೆ ಅವನ ಹೆಂಡತಿ ಹೇಳಿದ್ದಳು. ಇದರಿಂದ ಕೋಪಗೊಂಡ ವ್ಯಕ್ತಿ ಸ್ನಾನ ಮುಗಿಸಿ ಹೊರಗೆ ಬಂದ ನಂತರ ಕಬ್ಬಿಣದ ರಾಡಿನಿಂದ ಪತ್ನಿಯ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತನ್ನ ಅಪ್ಪನನ್ನು 23 ವರ್ಷದ ಮಗಳನ್ನು ತಡೆಯಲು ಪ್ರಯತ್ನಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.