ಬೆಂಗಳೂರು: ಇದು ಸೋಷಿಯಲ್ ಮೀಡಿಯಾ ಯುಗ. ಈಗ ಕ್ರಿಮಿನಲ್ ಗಳಿಗೂ ವಿಡಿಯೋ ಹರಿಯಬಿಡುವ ಚಾಳಿ ಅಂಟಿಕೊಂಡಿದೆ. ಭಯಾನಕ ವಿಚಾರವಂದತೆ ಕ್ರಿಮಿನಲ್ ಗಳಿಗೆ ತಾವು ಮಾಡುವ ತಪ್ಪನ್ನು ವಿಡಿಯೋ ಮಾಡಿ ಹರಿಯಬಿಡುವುದರಿಂದ ಸಿಕ್ಕಿ ಹಾಕಿಕೊಳ್ಳುವ ಭಯವೂ ಇಲ್ಲ!
ಮೊನ್ನೆಯಷ್ಟೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಬೆತ್ತಲೆ ವಿಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹರಿಯಬಿಡುತ್ತೇನೆಂದು ಹೆದರಿಸಿ ವರದಕ್ಷಿಣೆ ಪೀಕುವ ಪ್ಲ್ಯಾನ್ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ಓದಿದ್ದೇವೆ.
ಇನ್ನೊಂದು ಕಡೆ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳೇ ತಮ್ಮನ್ನು ಪ್ರಶ್ನೆ ಮಾಡಿದ ಸಹ ವಿದ್ಯಾರ್ಥಿಯ ಬೆತ್ತಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದು ನಡೆದಿದೆ. ಇನ್ಯಾರೋ ಆತ್ಮಹತ್ಯೆ ಮಾಡುವುದನ್ನೇ ಲೈವ್ ವಿಡಿಯೋ ಮಾಡಿ ಪ್ರಕಟಿಸುತ್ತಾರೆ.
ವಿಡಿಯೋ ಮಾಡುವ ಹುಚ್ಚು ಇಂದಿನ ಜನಕ್ಕೆ ಎಷ್ಟಿದೆಯೆಂದರೆ ಇದೀಗ ಮತ್ತೊಂದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಉನ್ನಾವೋದಲ್ಲಿ ನಡೆದಿದೆ. ಮೂವರು ಕಾಮುಕರು ಮಹಿಳೆಯನ್ನು ರೇಪ್ ಮಾಡಲು ಹವಣಿಸುವ ದೃಶ್ಯವನ್ನು ನಾಲ್ಕನೆಯವನು ಸೆರೆ ಹಿಡಿದು ವಿಡಿಯೋ ವೈರಲ್ ಮಾಡಿದ್ದಾನೆ. ಎಷ್ಟೆಂದರೆ ಆ ವಿಡಿಯೋದಲ್ಲಿ ವಿಡಿಯೋ ಮಾಡಿದ ವ್ಯಕ್ತಿ ಈ ವಿಡಿಯೋವನ್ನು ಟಿವಿಯಲ್ಲೂ ವೈರಲ್ ಮಾಡುತ್ತೇನೆಂದು ಹೇಳುತ್ತಾನೆ.
ಅಲ್ಲಿಯವರೆಗೆ ನಮ್ಮ ನಾಗರಿಕ ಸಮಾಜ ಬಂದು ತಲುಪಿದೆ. ಹೀಗಾಗಿ ಅಪರಿಚಿತರು ಫೋಟೋ, ವಿಡಿಯೋ ಮಾಡಲು ಹೊರಟರೆ ಅದಕ್ಕೆ ಅವಕಾಶ ಕೊಡಬೇಡಿ. ಮಕ್ಕಳೇ ಆಗಿದ್ದರೂ ಅಪರಿಚಿತರಿಗೆ ಪೋಸ್ ಕೊಡದಂತೆ ನೋಡಿಕೊಳ್ಳಿ.
ಇದೊಂದು ಖಾಯಿಲೆಯಂತೇ ಹರಡುತ್ತಿದೆ. ಸೈಬರ್ ಕ್ರೈಂ, ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು ಎಷ್ಟೇ ಮುನ್ನಚ್ಚರಿಕೆ ವಹಿಸಿದರೂ ಇಂತಹ ಪ್ರಮಾದಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಯಾವ ಕಾನೂನುಗಳೂ ಇಂತಹದ್ದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.