ಕಾಂಗ್ರೆಸ್‌ ಗೆಲುವಿನಲ್ಲಿ ಭಾರತ್‌ ಜೋಡೊ ಪಾತ್ರ ಅಧಿಕ: ಮಲ್ಲಿಕಾರ್ಜುನ ಖರ್ಗೆ

Sampriya

ಶನಿವಾರ, 8 ಜೂನ್ 2024 (13:46 IST)
ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಪಾದಯಾತ್ರೆ ಪ್ರತಿಫಲಿಸಿದೆ. ಪಾದಯಾತ್ರೆ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಲು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಇಂದು ಸಭೆ ಸೇರಿದೆ. ಆ ಸಭೆಯಲ್ಲಿ ಖರ್ಚೆ ಮಾತನಾಡಿದರು. ರಾಹುಲ್ ಅವರ ನೇತೃತ್ವದಲ್ಲಿ ಎರಡು ವರ್ಷಗಳ ಹಿಂದೆ 4,000 ಕಿ.ಮೀ. ಉದ್ದದ ಭಾರತ್ ಜೋಡೊ ಯಾತ್ರೆ ಮತ್ತು 6,600 ಕಿ.ಮೀ ಉದ್ದದ ಭಾರತ್ ಜೋಡೊ ನ್ಯಾಯ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿದೆ ಎಂದು ಹೇಳಿದರು.

 ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ದೇಶದಾದ್ಯಂತ ಕಾಂಗ್ರೆಸ್‌ಗೆ ಜನರಿಂದ ಅಪಾರ ಬೆಂಬಲ ಸಿಕ್ಕಿದೆ. ಜನರು ನಮ್ಮ ಮೇಲೆ ನಂಬಿಕೆಯನ್ನಿಡುವ ಮೂಲಕ ಸರ್ವಾಧಿಕಾರಿ ಶಕ್ತಿಗಳು ಹಾಗೂ ಸಂವಿಧಾನ ವಿರೋಧಿ ಶಕ್ತಿಗಳಿಗೆ ಪ್ರಬಲ ತಿರುಗೇಟು ನೀಡಿದ್ದಾರೆ. ಬಿಜೆಪಿಯ 10 ವರ್ಷಗಳ ವಿಭಜನೆ, ದ್ವೇಷ ಹಾಗೂ ಧ್ರುವೀಕರಣ ರಾಜಕಾರಣವನ್ನು ದೇಶದ ಮತದಾರರು ತಿರಸ್ಕರಿಸಿದ್ದಾರೆ ಎಂದು ಅವರು ತಿಳಿಸಿದರು.

ಸಂವಿಧಾನ, ಆರ್ಥಿಕತೆ, ನಿರುದ್ಯೋಗ, ಅಸಮಾನತೆ, ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಜನರ ಮುಂದಿಟ್ಟಿರುವ ರಾಹುಲ್ ಗಾಂಧಿ ಅವರಿಗೂ ಅಭಿನಂದನೆಗಳು. ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಅಭಿನಂದನೆಗಳು ಎಂದರು.

ನ್ಯಾಯ ಯಾತ್ರೆ ಆರಂಭವಾದ ಮಣಿಪುರದಲ್ಲಿ ಎರಡೂ ಸ್ಥಾನಗಳನ್ನು ಗೆದ್ದಿದ್ದೇವೆ. ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ ಮುಂತಾದ ಈಶಾನ್ಯ ರಾಜ್ಯಗಳಲ್ಲೂ ಸೀಟು ದೊರಕಿದೆ. ಮಹಾರಾಷ್ಟ್ರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು ಹೆಚ್ಚಿವೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ