ಮುಂಬೈ: ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಯು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದೆ. ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಧೂಳೀಪಟವಾಗಿದ್ದು, ಅಧಿಕೃತ ವಿಪಕ್ಷ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
ಮಹಾಯುತಿ ಮೈತ್ರಿಕೂಟವು 227 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಮಹಾ ವಿಕಾಸ ಅಘಾಡಿಯು 54 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಶಕ್ತವಾಗಿದೆ. ಇತರೆ ಪಕ್ಷ ಹಾಗೂ ಪಕ್ಷೇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಹೀನಾಯ ಸೋಲು ಕಂಡಿರುವ ಮಹಾವಿಕಾಸ್ ಅಘಾಡಿಗೆ ಚುನಾವಣಾ ಫಲಿತಾಂಶ ದೊಡ್ಡ ಮರ್ಮಾಘಾತವನ್ನೇ ನೀಡಿದೆ. ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಯಾವುದೇ ಪಕ್ಷವೂ ಅಧಿಕೃತ ವಿಪಕ್ಷ ಸ್ಥಾನಮಾನ ಗಳಿಸುವಷ್ಟು ಸ್ಥಾನಗಳನ್ನು ಪಡೆದಿಲ್ಲ.
95 ಸ್ಥಾನಗಳಲ್ಲಿ ಸ್ಪರ್ಧಿಸಿದ ಉದ್ದವ್ ಠಾಕ್ರೆ ಶಿವಸೇನೆ ಬಣ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 101 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಪಕ್ಷ ಕೇವಲ 17 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ.
ಕಳೆದ ಬಾರಿ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಬರೊಬ್ಬರಿ 27 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಅಂತೆಯೇ 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಶರದ್ ಪವಾರ್ ಎನ್ ಸಿಪಿ ಪಕ್ಷ 9 ಸ್ಥಾನಗಳನ್ನು ಮಾತ್ರ ಪಡೆದಿದೆ.
ಅಧಿಕೃತ ವಿಪಕ್ಷ ಸ್ಥಾನ ಗಳಿಸಲು ಕನಿಷ್ಠ 29 ಸ್ಥಾನಗಳನ್ನು ಗೆದ್ದಿರಬೇಕು. ಹಾಲಿ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಬಣ 21 ಸ್ಥಾನ, ಕಾಂಗ್ರೆಸ್ 17 ಸ್ಥಾನ ಮತ್ತು ಶರದ್ ಪವಾರ್ ಎನ್ ಸಿಪಿ ಪಕ್ಷ 9 ಸ್ಥಾನಗಳನ್ನು ಮಾತ್ರ ಪಡೆದಿದೆ. ಹೀಗಾಗಿ ಮಹಾವಿಕಾಸ್ ಅಘಾಡಿಯ ಯಾವುದೇ ಪಕ್ಷವೂ ಅಧಿಕೃತ ವಿಪಕ್ಷ ಸ್ಥಾನಕ್ಕೆ ಅರ್ಹತೆ ಪಡೆಯದೇ ಇರುವುದು ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿದೆ.