ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮುನ್ನಡೆ: ಇವಿಎಂ ತಿರುಚಿದ್ದಾರೆ ಎಂದು ಸಂಜಯ್ ರಾವತ್ ಆರೋಪ

Krishnaveni K

ಶನಿವಾರ, 23 ನವೆಂಬರ್ 2024 (10:49 IST)
ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಗೆ ಭಾರೀ ಮುನ್ನಡೆ ಲಭಿಸುತ್ತಿದ್ದಂತೇ ಚುನಾವಣಾ ಆಯೋಗದ ಮೇಲೆ ಶಿವಸೇನೆಯ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಆರಂಭದಲ್ಲಿ ಅಘಾಢಿ ಮತ್ತು ಮಹಾಯುತಿ ನಡುವೆ ಭಾರೀ ಪೈಪೋಟಿಯಿತ್ತು. ಆದರೆ ಇದೀಗ ಬಿಜೆಪಿ ನೇತೃತ್ವದ ಮಹಾಯುತಿ 221 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಇತ್ತ ಕಾಂಗ್ರೆಸ್, ಎನ್ ಸಿಪಿ ನೇತೃತ್ವದ ಅಘಾಡಿ ಮುನ್ನಡೆ 53 ಸ್ಥಾನಕ್ಕೆ ಕುಸಿದಿದೆ.

ಈ ಅಂತರ ಬರುತ್ತಿದ್ದಂತೇ ಮಾಧ್ಯಮಗಳ ಮುಂದೆ ಮಾತನಾಡಿದ ಸಂಜಯ್ ರಾವತ್, ಇವಿಎಂ ತಿರುಚಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದಾನಿ ಸೇರಿಕೊಂಡು ಫಲಿತಾಂಶವನ್ನು ತಮಗೆ ಬೇಕಾದ ಹಾಗೆ ತಿರುಚಿದ್ದಾರೆ. ಬಿಜೆಪಿ ನಮ್ಮ ದೇಶವನ್ನು ಅದಾನಿ ದೇಶ ಮಾಡಲು ಹೊರಟಿದೆ. ಇವಿಎಂನ್ನು ಬಿಜೆಪಿಗೆ ಬೇಕಾದಂತೆ ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಇದು ನಿಜವಾಗಿಯೂ ಸಿಕ್ಕಿದ ಜನಾದೇಶವಲ್ಲ. ಬಿಜೆಪಿಯವರು ಇವಿಎಂನ್ನು ತಿರುಚಿ ತಮಗೆ ಬೇಕಾದಂತೆ ಫಲಿತಾಂಶ ಪಡೆದುಕೊಂಡಿದ್ದಾರೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಸಮೀಕ್ಷಾ ವರದಿಗಳಿಗೆ ವಿರುದ್ಧವಾಗಿ ತೀರ್ಪು ಬಂದಾಗ ಇಂತಹದ್ದೇ ಆರೋಪ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ