ಪಾಟ್ನಾ: ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಯಾಕೆ ಸುಧಾರಿಸುತ್ತಿಲ್ಲ ಎಂದು ನೀವು ಪ್ರಶ್ನೆ ಕೇಳಿದರೆ ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ನಮ್ಮ ದೇಶದಲ್ಲಿ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆಯೂ ಹೊರತಲ್ಲ. ಬಿಹಾರದ ಶಿಕ್ಷಣ ಇಲಾಖೆಯ ಡಿಇಒ ರಜನೀಕಾಂತ್ ಪ್ರವೀಣ್ ಎಂಬವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ನೋಟಿನ ಕಂತೆ ನೋಡಿಯೇ ದಂಗುಬಡಿದಂತಾಗಿದೆ.
ಹಾಸಿಗೆಯ ಅಡಿಯಲ್ಲಿ ನೋಟಿನ ಕಂತೆಯೇ ತುಂಬಿಡಲಾಗಿತ್ತು. ಎಲ್ಲವೂ 500, 100, 200 ಮುಖ ಬೆಲೆಯ ಕಂತೆ ಕಂತೆ ನೋಟಿನ ಕಟ್ಟುಗಳು. ಇದೆಲ್ಲವನ್ನೂ ಎಣಿಸಲು ಅಧಿಕಾರಿಗಳು ನೋಟಿನ ಮೆಷಿನ್ ನ್ನೇ ತರಬೇಕಾಗಿ ಬಂತು.
ಎಲ್ಲಾ ನೋಟಿಗಳನ್ನು ಎಣಿಸಿ ನೋಡಿದರೆ ಬರೋಬ್ಬರಿ 1.87 ಕೋಟಿ ರೂ.ಗಳ ಕಂತೆಯೇ ಸಿಕ್ಕಿದೆ. ರಜನೀಕಾಂತ್ ಸುಮಾರು 19 ವರ್ಷ ಸೇವಾವಧಿಯ ಅನುಭವ ಹೊಂದಿದ್ದಾರೆ. ಆದರೆ ಇಷ್ಟು ಸಮಯದಲ್ಲಿ ಇವರು ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ತಮ್ಮದೇ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಈ ಅಕ್ರಮ ಹಣದಿಂದಲೇ ಅವರು ಶಾಲೆ ನಡೆಸುತ್ತಿದ್ದಾರೆ ಎಂಬುದು ಈಗ ಬೆಳಕಿಗೆ ಬಂದಿದೆ. ಇದೀಗ ಈತನಿಗೆ ಯಾವೆಲ್ಲಾ ಮೂಲಗಳಿಂದ ಹಣ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.