ಸಿನೆಮಾ ನಟಿ ನಯನತಾರಾಳಂತೆ ನಟಿಸಿ ಅಪರಾಧಿಯನ್ನು ಸೆರೆಹಿಡಿದ ಪೊಲೀಸ್ ಅಧಿಕಾರಿ

ಶನಿವಾರ, 23 ಡಿಸೆಂಬರ್ 2017 (12:11 IST)
ಬಿಜೆಪಿ ಸಚಿವರೊಬ್ಬರ ಕದ್ದ ಮೊಬೈಲ್ ಬಳಸುತ್ತಿದ್ದ ಕುಖ್ಯಾತ ಅಪರಾಧಿಯನ್ನು ಸೆರೆಹಿಡಿಯಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬಳು ಸಿನೆಮಾ ನಟಿ ನಯನತಾರಾಳ ಭಾವಚಿತ್ರವನ್ನು ಬಳಸಿಕೊಂಡು ಪ್ರೀತಿಯ ನಾಟಕವಾಡಿ ಅಪರಾಧಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ. 
ಕದ್ದ ಮೊಬೈಲ್ ಫೋನ್, ಗ್ಯಾಂಗ್‌ಸ್ಟರ್ ಮತ್ತು ದಕ್ಷಿಣ ಭಾರತ ಸಿನೆಮಾ ಕ್ಷೇತ್ರದ ಖ್ಯಾತ ನಟಿಯೊಬ್ಬಳ ಫೋಟೋ ಮತ್ತು ಮಹಿಳಾ ಪೊಲೀಸ್ ಅಧಿಕಾರಿಯ ಸುತ್ತವಿರುವ ಕಥಾ ಚಿತ್ರಣ.
 
ಪಟ್ನಾ ರಾಜಧಾನಿಯಿಂದ 150 ಕಿ.ಮೀ ದೂರದಲ್ಲಿರುವ ದರ್ಭಾಂಗ್ ಜಿಲ್ಲೆಯ ಬಿಜೆಪಿ ಸಚಿವ ಸಂಜಯ್ ಕುಮಾರ್ ಮಹತೋ ಅವರ ದುಬಾರಿ ಮೊಬೈಲ್ ಫೋನ್‌ನ್ನು ಮೊಹ್ಮದ್ ಹಸನೈನ್ ಎನ್ನುವ ಕುಖ್ಯಾತ ಅಪರಾಧಿ ಕದ್ದಿರುತ್ತಾನೆ. ಫೋನ್ ಕಳುವಾದ ಬಗ್ಗೆ ಮಹಿಳಾ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
 
ಬಿಜೆಪಿ ಸಚಿವರ ಕಳುವಾದ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ, ಫೋನ್ ಚಾಲನೆಯಲ್ಲಿರುವುದು ಪತ್ತೆಯಾಗುತ್ತದೆ. ಪೊಲೀಸರು ಹಲವಾರು ಬಾರಿ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ವಿಫಲರಾಗಿರುತ್ತಾರೆ.
 
ಮಹಿಳಾ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿಯವರಿಗೆ ಹೊಸದೊಂದು ಐಡಿಯಾ ಹೊಳೆಯುತ್ತದೆ. ಆರೋಪಿ ಹಸ್‌ನೈನ್‌‌ನನ್ನು ಪ್ರೀತಿಸುತ್ತಿರುವುದಾಗಿ ಯುವತಿಯಂತೆ ನಟಿಸಿ ಮಧುಬಾರಾ ಕರೆ ಮಾಡುತ್ತಾರೆ. ಹಲವಾರು ಬಾರಿ ಕರೆ ಮಾಡಿದರೂ ಹಸನೈನ್ ಆಸಕ್ತಿ ತೋರುವುದಿಲ್ಲ. 
 
ನಂತರ ಆರೋಪಿ ಹಸನೈನ್ ಯುವತಿ(ಮಹಿಳಾ ಪೊಲೀಸ್ ಅದಿಕಾರಿ)ಗೆ ಕರೆ ಮಾಡಿ ಫೋಟೋ ಕಳುಹಿಸುವಂತೆ ಕೋರುತ್ತಾನೆ.  ಮಧುಬಾಲಾ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನತಾರಾಳ ಫೋಟೋ ಕಳುಹಿಸುತ್ತಾರೆ.
 
ನಯನತಾರಾ ಫೋಟೋ ನೋಡಿದ ಆರೋಪಿ ಆಕೆಯ ಸೌಂದರ್ಯಕ್ಕೆ ಮರುಳಾಗಿ ಕೂಡಲೇ ನಿಗದಿತ ಸ್ಥಳವೊಂದರಲ್ಲಿ ಭೇಟಿಯಾಗಲು ಒಪ್ಪುತ್ತಾನೆ. ಆರೋಪಿ ಹಸನೈನ್ ಬಂದ ಕೂಡಲೇ ಮಫ್ತಿಯಲ್ಲಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. 
 
ಮಹಿಳಾ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ಬುರ್ಕಾ ಧರಿಸಿದ್ದರಿಂದ ಆರೋಪಿ ಹಸನೈನ್ ಆಕೆಯನ್ನು ಗುರುತಿಸುವಲ್ಲಿ ವಿಫಲವಾಗುತ್ತಾನೆ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.
 
ಬಿಜೆಪಿ ಸಚಿವ ಸಂಜಯ್ ಕುಮಾರ್ ಮೊಬೈಲ್ ಕದ್ದ ಬಗ್ಗೆ ಆರೋಪಿ ಹಸನೈನ್ ಒಪ್ಪಿಕೊಳ್ಳುತ್ತಾನೆ. ಆದರೆ, ತಾನು ಮತ್ತೊಬ್ಬ ಅಪರಾಧಿಯಿಂದ 4500 ರೂ.ಗಳಿಗೆ ಖರೀದಿಸಿದ್ದಾಗಿ ತಿಳಿಸಿದಾಗ ಮತ್ತೊಬ್ಬ ಆರೋಪಿಯನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಮಹಿಳಾ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿಯವರ ಚಾಕಚಕ್ಯತೆಗೆ ಬೆರಗಾಗಿ ಬಿಹಾರ್ ಪೊಲೀಸ್ ಇಲಾಖೆ ಅವರಿಗೆ ನಗದು  ಬಹುಮಾನ ಘೋಷಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ