ಬಿಹಾರ್ ಸಿಎಂ ನಿತೀಶ್ ಕುಮಾರ್ ಶಾಸಕ ಸ್ಥಾನ ರದ್ದತಿ ಕೋರಿ ಪಿಐಎಲ್

ಮಂಗಳವಾರ, 1 ಆಗಸ್ಟ್ 2017 (14:26 IST)
ನೆನೆಗುದಿಯಲ್ಲಿರುವ ಅಪರಾಧ ಪ್ರಕರಣವನ್ನು ಕೇಂದ್ರ ಚುನಾವಣೆ ಆಯೋಗದ ಮುಂದೆ ಮುಚ್ಚಿಟ್ಟಿದ್ದ ಹಿನ್ನೆಲೆಯಲ್ಲಿ  ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯ ವಿಧಾನಸಭೆಯ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದೆ.
 
ನ್ಯಾಯಮೂರ್ತಿಗಳಾದ ಜಸ್ಟಿಸ್ ದೀಪಕ್ ಮಿಶ್ರಾ, ಅಮಿತಾವಾ ರಾಯ್ ಮತ್ತು ಎ ಎಂ ಖಾನ್ವಿಲ್ಕರ್ ಅವರ ಪೀಠವು ಅರ್ಜಿದಾರರಾದ ಎಂ. ಎಲ್. ಶರ್ಮಾ ಅವರ ಮನವಿಯ ತುರ್ತು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಕೋರ್ಟ್ ತಿಳಿಸಿದೆ.
 
ಕಳೆದ 1991ರ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕ ಸೀತಾರಾಮ್ ಸಿಂಗ್ ಹತ್ಯೆ ಮತ್ತು ಇತರ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿದ ಪ್ರಕರಣದಲ್ಲಿ ಜೆಡಿಯು ಮುಖಂಡ ನಿತೀಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು. ಆದರೆ, ನಿತೀಶ್ ಕುಮಾರ್ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿದೆ ಮುಚ್ಚಿಟ್ಟಿದ್ದರು. ಇದೀಗ ಕ್ರಿಮಿನಲ್ ಕೇಸ್ ನಿತೀಶ್ ಶಾಸಕ ಸ್ಥಾನಕ್ಕೆ ಕುತ್ತು ಎಂದು ಪರಿಗಣಿಸಲಾಗಿದೆ.
 
ಈ ಪ್ರಕರಣದಲ್ಲಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
 
ನಿತೀಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಗೊತ್ತಿದ್ದರೂ ಅವರ ಶಾಸಕ ಸದಸ್ಯತ್ವವನ್ನು ರದ್ದುಗೊಳಿಸಿಲ್ಲ. ಇಂದಿಗೂ ನಿತೀಶ್ ಕುಮಾರ್ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅದಕ್ಕೆ ಕೇಂದ್ರ ಚುನಾವಣೆ ಆಯೋಗ  ಹೊಣೆಯಾಗಿದೆ. ಆಯೋಗದ ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದಾರೆ.  
 
ಚುನಾವಣಾ ಆಯೋಗದ 2002 ರ ಆದೇಶದ ಪ್ರಕಾರ, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ವಿರುದ್ಧದ ಅಪರಾಧ ಪ್ರಕರಣಗಳ ಬಗ್ಗೆ ವಿವರಣೆ ನೀಡುವುದು ಕಡ್ಡಾಯವಾಗಿದೆ. ಆದರೆ, ನಿತೀಶ್ ಕುಮಾರ್ ಚುನಾವಣೆ ಆಯೋಗಕ್ಕೆ ಕ್ರಿಮಿನಲ್ ಕೇಸ್ ಬಗ್ಗೆ ವಿವರಣೆ ನೀಡದಿದ್ದರಿಂದ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ದೂರುದಾರರು ವಾದಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ