ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಚಂದ್ರಚೂಡ ಮನೆಯಲ್ಲಿ ನಡೆದ ಗಣೇಶ ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿರುವುದನ್ನು ವಿಪಕ್ಷಗಳು ಪ್ರಶ್ನೆ ಮಾಡಿವೆ. ಇದರ ಬೆನ್ನಲ್ಲೇ ಬಿಜೆಪಿ ಸಮರ್ಥಕರು ಮನಮೋಹನ್ ಸಿಂಗ್ ಹಳೆಯ ಫೋಟೋ ಟ್ರೆಂಡ್ ಮಾಡಿ ಪ್ರಶ್ನೆ ಮಾಡಿವೆ.
ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇಫ್ತಾರ್ ಕೂಟ ಆಯೋಜಿಸಿದ್ದರು. ಇದಕ್ಕೆ ಅಂದು ಮುಖ್ಯನ್ಯಾಯಮೂರ್ತಿಗಳಾಗಿದ್ದ ಜಸ್ಟಿಸ್ ಬಾಲಕೃಷ್ಣನ್ ಆಗಮಿಸಿದ್ದರು. ಆ ಫೋಟೋವನ್ನು ಇದೀಗ ಬಿಜೆಪಿಗರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮನಮೋಹನ್ ಸಿಂಗ್ ಇಫ್ತಾರ್ ಪಾರ್ಟಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಭಾಗಿಯಾಗಬಹುದು. ಆದರೆ ಪ್ರಧಾನಿ ಮೋದಿ ಮಾತ್ರ ಮುಖ್ಯ ನ್ಯಾಯಮೂರ್ತಿಗಳ ಜೊತೆ ಗಣೇಶ ಹಬ್ಬ ಮಾಡಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ಗಣೇಶ ಹಬ್ಬ ಮಾಡಿದರೆ ಮಾತ್ರ ಜತ್ಯಾತೀತ ತತ್ವಕ್ಕೆ ಧಕ್ಕೆಯಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಇನ್ನು ಕೆಲವರು ಮನಮೋಹನ್ ಸಿಂಗ್ ಆವತ್ತು ಸರ್ಕಾರದಿಂದಲೇ ಆಯೋಜನೆಯಾದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು. ಆದರೆ ಈಗ ಮೋದಿ ಭಾಗಿಯಾಗಿರುವುದು ಚಂದ್ರಚೂಡ್ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ. ಇದು ಖಾಸಗಿ ಕಾರ್ಯಕ್ರಮ ಎಂದು ತಗಾದೆ ತೆಗೆದಿದ್ದಾರೆ.