ನವದೆಹಲಿ : ವಿರೋಧ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಬಿಜೆಪಿ ಸಂಘಟನಾ ಅನುಕೂಲಕ್ಕಾಗಿ ಮೂರು ವಲಯಗಳನ್ನಾಗಿ ವಿಂಗಡಿಸಿ ಸಭೆ ನಡೆಸಲು ಮುಂದಾಗಿದೆ.
ಉತ್ತರ, ದಕ್ಷಿಣ ಮತ್ತು ಪೂರ್ವ ವಲಯಗಳನ್ನು ಗುರುತಿಸಲಾಗಿದ್ದು ಈ ಪ್ರದೇಶಗಳ ಪ್ರತ್ಯೇಕ ಸಭೆಗಳು ಜುಲೈ 6, 7 ಮತ್ತು 8 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ರಾಜಸ್ಥಾನ, ಗುಜರಾತ್, ದಮನ್ ದಿಯು-ದಾದ್ರಾ ಮತ್ತು ನಗರ ಹವೇಲಿ, ಮಧ್ಯಪ್ರದೇಶ, ಛತ್ತೀಸ್ಗಢ, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಹರ್ಯಾಣವನ್ನು ಉತ್ತರ ವಲಯದಲ್ಲಿ ಇರಿಸಲಾಗಿದೆ. ಜುಲೈ 7 ರಂದು ದೆಹಲಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳು ಪೂರ್ವ ವಲಯದಲ್ಲಿದ್ದು ಇದರ ಸಭೆ ಜುಲೈ 6 ರಂದು ಗುವಾಹಟಿಯಲ್ಲಿ ನಡೆಯಲಿದೆ.
ಕೇರಳ, ತಮಿಳುನಾಡು, ಪುದುಚೇರಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದಕ್ಷಿಣ ವಲಯದಲ್ಲಿದ್ದು, ಈ ರಾಜ್ಯಗಳ ಸಭೆ ಜುಲೈ 8 ರಂದು ಹೈದರಾಬಾದ್ನಲ್ಲಿ ನಡೆಯಲಿದೆ.