ಅತ್ಯಾಚಾರಿಗಳನ್ನು ಬಂಧಿಸಲು ನೆರವಾದ ಅಪ್ರಾಪ್ತೆಯರು

ಶುಕ್ರವಾರ, 1 ಜುಲೈ 2016 (16:11 IST)
ಫೇಸ್‌ಬುಕ್ ಮೂಲಕ ತಮ್ಮನ್ನು ಪರಿಚಯಿಸಿಕೊಂಡು ವಂಚಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಲು ಮೂವರು ಅಪ್ರಾಪ್ತ ಬಾಲಕಿಯರು ಪೊಲೀಸರಿಗೆ ಸಹಾಯ ಮಾಡಿದ ದಿಟ್ಟತನದ ಘಟನೆ ಮುಂಬೈನಲ್ಲಿ ನಡೆದಿದೆ. ಇವರ ಮೂಲಕ ಸಾಮಾಜಿಕ ಜಾಲತಾಣ ಬಳಸಿಕೊಂಡು ಹದಿಹರೆಯದ ಅಮಾಯಕ ಯುವತಿಯರ ಮೇಲೆ ಲೈಂಗಿಕ ಶೋಷಣೆಯನ್ನು ಮಾಡುತ್ತಿದ್ದ ಅಪಾಯಕಾರಿ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿದೆ. 
 
ಬಂಧಿತನನ್ನು 25 ವರ್ಷದ ನಲಸೋಪಾರದ ಸಂತೋಷ್ ಭುವನ್ ನಿವಾಸಿ ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು ಫೇಸ್‌ಬುಕ್‌ನಲ್ಲಿ ತಾನು ಮಹಿಳೆಯಂತೆ ಬಿಂಬಿಸಿಕೊಂಡ ಆತ  ಅನೇಕ ಬಾಲಕಿಯರನ್ನು ಪರಿಚಯಿಸಿಕೊಂಡು ಮಾಡೆಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿದ್ದಾನೆ. 
 
ಫೇಸ್‌ಬುಕ್‌ನಲ್ಲಾತ ತನ್ನ ಹೆಸರನ್ನು ಪ್ರಜ್ಞಾ ಎಂದು ಬರೆದುಕೊಂಡಿದ್ದ. ಮಾಡೆಲಿಂಗ್ ಆಫರ್ ಕೊಡಿಸುವುದಾಗಿ ಹೇಳಿ ಕಾಲೇಜು ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ ಆತ ಬಳಿಕ ಅವರ ಆರ್ಥಿಕ ಹಿನ್ನೆಲೆ ಸಮೇತ ವೈಯಕ್ತಿತ ಮಾಹಿತಿಯನ್ನು ಸಹ ಕಲೆ ಹಾಕುತ್ತಿದ್ದ. ಒಂದು ವೇಳೆ ಅವರು ಮಾಡೆಲಿಂಗ್‌ನಲ್ಲಿ ಆಸಕ್ತಿ ತೋರಿದರೆ ತಮ್ಮ ಬಾಸ್ ಸಂದೀಪ್(ತಾನೇ)ನನ್ನು ಭೇಟಿಯಾಗುವಂತೆ ಹೇಳುತ್ತಿದ್ದ.  
 
ಫೋಟೋ ಶೂಟ್ ನೆಪದಲ್ಲಿ ಸಮುದ್ರ ತೀರದ ರೆಸಾರ್ಟ್‌ಗಳಾದ ಅರ್ನಾಲಾ ಅಥವಾ ಕಲಂನಲ್ಲಿ ಭೇಟಿಯನ್ನು ನಿಗದಿ ಪಡಿಸುತ್ತಿದ್ದ ಆತ ಮಾದಕ ದ್ರವ್ಯ ಬೆರೆಸಿದ ಪಾನೀಯವನ್ನು ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅವರಿಗೆ ಎಚ್ಚರವಾದ ಬಳಿಕ ಲೈಂಗಿಕವಾಗಿ ಬಳಸಿಕೊಂಡ ದೃಶ್ಯಾವಳಿಗಳನ್ನು ಅವರಿಗೆ ತೋರಿಸಿ ಹಣ ಕೀಳುತ್ತಿದ್ದ.
 
ಇದೇ ರೀತಿಯಲ್ಲಾತ ಅನೇಕ ಯುವತಿಯರಿಗಾತ ವಂಚನೆ ಮಾಡಿದ್ದ. ತಲಾ 45,000 ನೀಡದಿದ್ದರೆ ತಾನು ಮಾಡಿರುವ ವಿಷಯವನ್ನು ವೈರಲ್ ಆಗಿ ಹರಿಯ ಬಿಡುವುದಾಗಿ ಇಬ್ಬರು ಯುವತಿಯರಾಗಾತ ಇತ್ತೀಚಿಗೆ ಬೆದರಿಕೆ ಹಾಕಿದ್ದ. ಕೆಲ ವಾರಗಳ ಹಿಂದೆ ಆತ ಯುವತಿಯೊಬ್ಬಳಿಗೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಅದನ್ನು ನೋಡಿದ ಪೊಲೀಸ್ ಪೇದೆಯೊಬ್ಬರು ಅವರಿಬ್ಬರನ್ನು ಠಾಣೆಗೆ ಕರೆದೊಯ್ದಿದ್ದರು. ಆಲ್ಲಿ ಆತನನ್ನು ಪ್ರಶ್ನಿಸಿ ಬಿಡಲಾಯಿತು. ಯುವತಿಯನ್ನು ವಿಚಾರಿಸಲಾಗಿ ಆತ ತನ್ನ ಸ್ನೇಹಿತೆಯ ಮೇಲೆ ನಡೆಸಿದ ದೌರ್ಜನ್ಯವನ್ನು ಆಕೆ ಹೊರ ಹಾಕಿದ್ದಳು. 
 
ಪೀಡಿತೆಯನ್ನು ವಿಚಾರಿಸಲಾಗಿ ಸತ್ಯ ಹೊರಬಿದ್ದಿತ್ತು. ಬಳಿಕ ಮತ್ತೊಬ್ಬ ಬಾಲಕಿ ಸಹ ತನ್ನ ಮೇಲಾದ ಶೋಷಣೆ ಕುರಿತು ಪೊಲೀಸರಿಗೆ ಹೇಳಿದ್ದಳು.
 
ಆತನನ್ನು ಬಲೆಗೆ ಕೆಡವಲು ಪೊಲೀಸರು ಆತ ರೂಪಿಸಿಟ್ಟ ಮಾರ್ಗವನ್ನೇ ಅನುಸರಿಸಿದರು. ದೌರ್ಜನ್ಯಕ್ಕೊಳಗಾಗಿರುವ 16 ವರ್ಷದ ಬಾಲಕಿಯೋರ್ವಳ ಸ್ನೇಹಿತೆಯಿಂದ ಪ್ರಜ್ಞಾ ಎಂಬ ಹೆಸರಲ್ಲಿರುವ ಫೇಸ್‌ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ಹೇಳಲಾಯಿತು. ಹಂತ ಹಂತವಾಗಿ ಸ್ನೇಹ ಬೆಳೆಸಿಕೊಂಡು ಕೊನೆಗೆ ರೆಸಾರ್ಟ್‌ನಲ್ಲಿ ಭೇಟಿಗೆ ನಿಗದಿಯಾಯಿತು ಮತ್ತು ಅದೇ ಸ್ಥಳದಲ್ಲಿ ಪೊಲೀಸರು ಆತನನ್ನು ಬಂಧಿಸಿದರು.
 
ಆರೋಪಿ ವಿರುದ್ಧ ಎರಡು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಮೂವರು ಪೀಡಿತರ ಸಹಕಾರದಿಂದ ತಾವು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು ಎಂದು ಪೊಲೀಸರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ