ಲೋಕಸಭೆ ಚುನಾವಣೆಗೆ ಮೊದಲು ಮಾಸ್ಟರ್ ಸ್ಟ್ರೋಕ್: ಸಿಎಎ ಜಾರಿಗೆ ಮುಂದಾದ ಕೇಂದ್ರ

Krishnaveni K

ಶನಿವಾರ, 10 ಫೆಬ್ರವರಿ 2024 (13:28 IST)
Photo Courtesy: Twitter
ನವದೆಹಲಿ: ಲೋಕಸಭೆ ಚುನಾವಣೆಗೆ ಮೊದಲು ಮೋದಿ ಸರ್ಕಾರ ಮತ್ತೊಂದು ಬ್ರಹ್ಮಾಸ್ತ್ರ ಬಳಸಲು ಮುಂದಾಗಿದೆ ದೇಶದಲ್ಲಿ ಪೌರತ್ವ ಕಾಯಿದೆ ಜಾರಿಗೆ ತರಲು ಮುಂದಾಗಿದೆ.

2024 ರ ಲೋಕಸಭೆ  ಚುನಾವಣೆಗೆ ಮೊದಲು ಪೌರತ್ವ ಕಾಯಿದೆ ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರ ಈ ಹೇಳಿಕೆ ದೇಶದಲ್ಲಿ ಮತ್ತೆ ಹೊಸ ಚರ್ಚೆಗೆ ದಾರಿ ಮಾಡಿಕೊಡಲಿದೆ. 2019 ರಲ್ಲಿ ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡಲಾಗಿತ್ತು. ಇದೀಗ ಜಾರಿ ಮಾಡುವ ಪ್ರಕ್ರಿಯೆ ನಡೆಯಲಿದೆ.

ಸಿಎಎ ಎಂದರೇನು?
ಸಿಎಎ ಅಥವಾ ಪೌರತ್ವ ಕಾಯಿದೆಯಡಿ 2014 ರ ಡಿಸೆಂಬರ್ ಒಳಗೆ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸುತ್ತಿರುವ ಹಿಂದೂ, ಸಿಖ್, ಬೌಧ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ ಸಮುದಾಯದವರಿಗೆ ಇಲ್ಲಿನ ಪೌರತ್ವ ನೀಡುವ ಕಾಯಿದೆಯಾಗಿದೆ. ಈ ಕಾಯಿದೆಯಲ್ಲಿ ಮುಸ್ಲಿಮರು ಒಳಗೊಳ್ಳುವುದಿಲ್ಲ. ಇದುವೇ ಕಾಂಗ್ರೆಸ್ ಸೇರಿದಂತೆ ಕೆಲವು ವಿಪಕ್ಷಗಳ ಪ್ರತಿರೋಧಕ್ಕೆ ಕಾರಣವಾಗಿದೆ. ಕೆಲವೆಡೆ ಇದರಿಂದ ಭಾರತೀಯ ಮುಸ್ಲಿಮರೂ ಪೌರತ್ವ ಕಳೆದುಕೊಳ್ಳಲಿದ್ದಾರೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ಇಲ್ಲಿನ ಪೌರತ್ವ ಹೊಂದಿರುವ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ.

ಅಮಿತ್ ಶಾ ಹೇಳಿದ್ದೇನು?
ಪೌರತ್ವ ಕಾಯಿದೆ ಜಾರಿಗೆ ತರಬೇಕೆಂದು ಮೊದಲು ಹೇಳಿದ್ದೇ ಕಾಂಗ್ರೆಸ್. ಆದರೆ ಈಗ ಕಾಂಗ್ರೆಸ್ ತನ್ನದೇ ಸ್ವ ಹಿತಾಸಕ್ತಿಗೆ ಕಾಯಿದೆಯನ್ನೇ ವಿರೋಧಿಸುತ್ತಿದೆ. ನಮ್ಮ ದೇಶದ ಅಲ್ಪಸಂಖ್ಯಾರನ್ನು ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ತಪ್ಪು ದಾರಿಗೆಳೆಯಲಾಗುತ್ತಿದೆ. ಸಿಎಎಯಿಂದ ಇಲ್ಲಿನ ಯಾರ ಪೌರತ್ವಕ್ಕೂ ಧಕ್ಕೆಯಾಗುವುದಿಲ್ಲ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳಿಂದ ನಿರಾಶ್ರಿತರಿಗೆ ಮಾತ್ರ ಈ ಕಾಯಿದೆಯಡಿ ಪೌರತ್ವ ನೀಡುವುದಾಗಿದೆ’ ಎಂದಿದ್ದಾರೆ. ಇದೀಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಸರ್ಕಾರ ಈ ಕಾಯಿದೆ ಜಾರಿಗೆ ತಂದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಕೆಸರೆರಚಾಟ ಮಾಡಲು ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ