ಖರ್ಗೆ ಕಪ್ಪು ಪತ್ರ ದೃಷ್ಟಿ ಬೊಟ್ಟು ಇಟ್ಟಂತೆ ಎಂದು ಕಾಲೆಳೆದ ಪ್ರಧಾನಿ ಮೋದಿ

Krishnaveni K

ಗುರುವಾರ, 8 ಫೆಬ್ರವರಿ 2024 (15:30 IST)
ನವದೆಹಲಿ: ಕೇಂದ್ರ ಸರ್ಕಾರ ಯುಪಿಎ ಮತ್ತು ಎನ್ ಡಿಎ ಅವಧಿಯ ಆರ್ಥಿಕ ಸ್ಥಿತಿ ಗತಿ ಕುರಿತು ಮಾಹಿತಿ ನೀಡುವ ಶ್ವೇತಪತ್ರ ಸಲ್ಲಿಸಲು ಹೊರಟಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಪ್ಪು ಪತ್ರ ಪ್ರಕಟಿಸಿ ತಮ್ಮ ಪ್ರತಿಭಟನೆ ಸಲ್ಲಿಸಿದ್ದರು.

ರಾಜ್ಯಸಭೆ ಕಲಾಪಕ್ಕೆ ಮುನ್ನ ಮಲ್ಲಿಕಾರ್ಜುನ ಖರ್ಗೆ ಪತ್ರಕರ್ತರ ಮುಂದೆ ಕಪ್ಪು ಪತ್ರ ಪ್ರದರ್ಶಿಸಿ ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಖರ್ಗೆಯನ್ನು ಕಾಲೆಳೆಯುವ ಯಾವ ಅವಕಾಶವನ್ನೂ ಪ್ರಧಾನಿ ಮೋದಿ ಬಿಡುವಂತೆ ಕಾಣುತ್ತಿಲ್ಲ. ಇದೇ ಕಾರಣಕ್ಕೆ ರಾಜ್ಯ ಸಭೆ ಕಲಾಪ ವೇಳೆ ಖರ್ಗೆ ಎದುರಿನಲ್ಲಿಯೇ ಅವರ ಕಪ್ಪು ಪತ್ರವನ್ನು ದೃಷ್ಟಿ ಬೊಟ್ಟಿನಂತೆ ಎಂದು ಕಾಲೆಳೆದಿದ್ದಾರೆ.

ಖರ್ಗೆಗೆ ಟಾಂಗ್ ಕೊಟ್ಟ ಮೋದಿ
ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ ‘ನಮ್ಮಲ್ಲಿ ಮಕ್ಕಳು ಹೊಸ ಬಟ್ಟೆ ಧರಿಸಿದಾಗ, ಮುದ್ದಾಗಿ ಕಂಡಾಗ ಏನು ಮಾಡುತ್ತೇವೆ? ದೃಷ್ಟಿ ಆಗದಿರಲಿ ಎಂದು ಕಪ್ಪು ಬೊಟ್ಟು ಇಡುತ್ತೇವೆ. ಅದೇ ರೀತಿ ಖರ್ಗೆಯವರು ನೀಡಿದ ಆ ಕಪ್ಪುಪತ್ರ ಅಭಿವೃದ್ಧಿಯಾಗುತ್ತಿರುವ ನಮ್ಮ ದೇಶಕ್ಕೆ ಕಪ್ಪು ದೃಷ್ಟಿ ಬೊಟ್ಟಿನಂತೆ’ ಎಂದು ಕಾಲೆಳೆದರು. ಅವರ ಈ ಮಾತಿಗೆ ಬಿಜೆಪಿ ಸದಸ್ಯರು ನಗೆಗಡಲಲ್ಲಿ ತೇಲಿದರು.

ನಿನ್ನೆಯೂ ಮೋದಿ ತಮ್ಮ ಭಾಷಣದ ವೇಳೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಕಾಲೆಯುವ ಯತ್ನ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಮೊನ್ನೆ ಮಾಡಿದ ಭಾಷಣದ ಬಗ್ಗೆ ಪ್ರಸ್ತಾಪಿಸಿ ಅವರನ್ನು ಕಮಾಂಡ್ ಮಾಡುವ ಇಬ್ಬರು ಇರಲಿಲ್ಲವಾಗಿದ್ದರಿಂದ ಅವರು ಸ್ವತಂತ್ರವಾಗಿ ಮಾತನಾಡಿದರು. ಖರ್ಗೆ ಮಾತು ಕೇಳಿ ನಾನು ತುಂಬಾ ಎಂಜಾಯ್ ಮಾಡಿದೆ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ