ನವದದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಿರೀಕ್ಷೆಯಂತೇ ರಾಜ್ಯಗಳು ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತಿವೆ. ಒಂದೊಂದೇ ನಾಯಕರ ತಲೆದಂಡವಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ. ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಕೇವಲ 9 ಸ್ಥಾನ ಗೆಲ್ಲಲಷ್ಟೇ ಶಕ್ತವಾಗಿದೆ. ಕಳೆದ ಬಾರಿ 23 ಸ್ಥಾನ ಗೆದ್ದುಕೊಂಡಿತ್ತು.
ಇನ್ನೊಂದೆಡೆ ಒಡಿಶ್ಶಾದಲ್ಲಿ ವಿಧಾನಸಭೆಯಲ್ಲಿ ಕಳಪೆ ಸಾಧನೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ಮುಂದೆ ಒಡಿಶ್ಸಾದಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ.
ಇನ್ನೊಂದೆಡೆ ಕರ್ನಾಟಕದಲ್ಲೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೂಗು ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯನಿರ್ವಹಣೆ ಬಗ್ಗೆ ಸತೀಶ್ ಜಾರಕಿಹೊಳಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಕಳಪೆ ಸಾಧನೆಗೆ ಡಿಕೆ ಶಿವಕುಮಾರ್ ಕೆಲವೊಂದು ಕ್ಷೇತ್ರಗಳನ್ನು ಕಡೆಗಣಿಸಿದ್ದೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕರ್ನಾಟಕದಲ್ಲೂ ಕೆಲವೊಂದು ಬದಲಾವಣೆ ಖಚಿತವಾಗಿದೆ.