ಸಮುದ್ರದ ನೀರಿನಲ್ಲಿ ತೈಲ ಮಿಶ್ರವಾಗಿರುವುದರಿಂದ ಲಕ್ಷಾಂತರ ಜಲಚರಗಳು ಭಾರಿ ಅಪಾಯದಲ್ಲಿವೆ.
ಕರಾವಳಿ ಕಾವಲು ಪಡೆಯ ನೂರಾರು ಸಿಬ್ಬಂದಿ, ಮೀನುಗಾರರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ತೈಲವನ್ನು ನೀರಿನಿಂದ ಬೇರ್ಪಡಿಯಲು ಭಾರಿಯಂತ್ರಗಳ ನೆರವಿನೊಂದಿಗೆ ಹರಸಾಹಸ ಪಡುತ್ತಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಆದರೆ ತೆರವು ಕಾರ್ಯ ತ್ವರಿತವಾಗಿ ಆಗದ ಕಾರಣ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ತೈಲ ಶೇಖರಣೆಯಾಗಿರುವ ತೀರದಲ್ಲಿ ಸತ್ತ ಮೀನುಗಳ ರಾಶಿ ಬಿದ್ದಿದ್ದು, 20 ಆಮೆಗಳ ಶವ ದೊರೆತಿದೆ. ಜಲಚರಗಳಿಗೆ ಕಂಟಕವಾಗುತ್ತಿರುವ ಈ ಮಾಲಿನ್ಯ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ಆಲಿವ್ ರಿಡ್ಲೆ ಆಮೆಗಳ ಸಂತಾನೋತ್ಪತ್ತಿ ಸಮಯ. ಹೀಗಾಗಿ ತೀರಕ್ಕೆ ಮೊಟ್ಟೆ ಇಡಲು ಬರುತ್ತಿರುವ ಆಮೆಗಳು ತೈಲದಲ್ಲಿ ತೊಯ್ದು ದುರ್ಮರಣವನ್ನಪ್ಪುತ್ತಿವೆ. ಈ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು ಸಂತಾನೋತ್ಪತ್ತಿ ನಡೆಯದೆ ಆಮೆಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ಅಪಾಯವಿದೆ, ಎಂದು ಪರಿಸರವಾದಿಗಳು, ಪ್ರಾಣಿದಯಾ ಸಂಘಟನೆ ಕಳವಳ ವ್ಯಕ್ತ ಪಡಿಸಿವೆ..