ನಾಗರೀಕ ಸಂಹಿತೆ ಅನಿವಾರ್ಯ: ದೆಹಲಿ ಹೈಕೋರ್ಟ್

ಶನಿವಾರ, 10 ಜುಲೈ 2021 (13:26 IST)
ವ ದೆಹಲಿ (ಜುಲೈ 10); ಏಕರೂಪ ನಾಗರೀಕ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಬಗ್ಗೆ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಡುವೆ ಏಕರೂಪ ನಾಗರೀಕ ನೀತಿ ಸಂಹಿತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, "ಆಧುನಿಕ ಭಾರತಕ್ಕೆ ಏಕ ರೂಪ ನಾಗರಿಕ ಸಂಹಿತೆ ಅಥವಾ ಯುನಿ ಫಾರ್ಮ್ ಸಿವಿಲ್ ಕೋಡ್ ಎಂದು ಕರೆಯುವ ಒಂದು ಕಾನೂನು ಅನಿವಾರ್ಯವಾಗಿದೆ" ಎಂದು ತಿಳಿಸಿದೆ.

ಅಲ್ಲದೆ, ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದೇ ಸಂದರ್ಭದಲ್ಲಿ ಏಕರೂಪ ನಾಗರೀಕ ನೀತಿ ಸಂಹಿತೆಯ ವಾಸ್ತವಿಕ ಅಗತ್ಯದ ಬಗ್ಗೆಯೂ ಮಾತನಾಡಿರುವ ದೆಹಲಿ ಹೈಕೋರ್ಟ್, "ಇಂದಿನ ಯುವಕ ಯುವತಿಯರು ಧರ್ಮ, ಜಾತಿಗಳನ್ನು ಮೀರಿ ಬೆಸೆದುಗೊಂಡಿದ್ದಾರೆ. ಬೇರೆ ಬೇರೆ ಜನಾಂಗ, ಬುಡಕಟ್ಟಿಗೆ ಸೇರಿಯೂ ಒಂದಾಗಿರುವ ಯುವ ಸಮುದಾಯಕ್ಕೆ ದೇಶದ ವಯಕ್ತಿಕ ಕಾನೂನುಗಳು ತೊಡಕಾಗಬಾರದು. ರಾಜ್ಯವು ಪ್ರಜೆಗಳಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ನೀಡಬೇಕು ಎಂದು ಸಂವಿಧಾನದ ಅನುಚ್ಛೇದವು ನಿರ್ದೇಶಿಸುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು" ಎಂದು ತಿಳಿಸಿದೆ.
ಪ್ರತಿಭಾ ಎಂ. ಸಿಂಗ್ ಅವರಿದ್ದ ಏಕ ಸದಸ್ಯಪೀಠ, ಮದುವೆ, ವಿಚ್ಛೇಧನ, ಆಸ್ತಿ ಮತ್ತು ವಾರಸುದಾರಿಕೆಗೆ ಸಂಬಂಧಿಸಿದಂತೆ ದೇಶದಲ್ಲಿ ಒಂದು ಸಮಾನ ಕಾನೂನು ಇರುವುದು ಇಂದಿನ ಅವಶ್ಯವಾಗಿದೆ. ಕಾನುನುಗಳಲ್ಲಿನ ಗೊಂದಲದ ಪರಿಣಾಮವಾಗಿಯೇ ಇಂದು ಅನೇಕರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.
ನ್ಯಾಯಾಲಯಗಳು ಪದೇ ಪದೇ ವಯಕ್ತಿಕ ಕಾನೂನುಗಳಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುತ್ತಿವೆ. ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಆಸಕ್ತಿಯನ್ನು ತೋರಿಸುತ್ತಿಲ್ಲ. 1985ರಲ್ಲಿ ಸುಪ್ರೀಂ ಕೋರ್ಟ್ ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಂತೆ ಸರ್ಕಾರಕ್ಕೆ ಸೂಚಿಸಿದೆ. ಅಲ್ಲಿಂದ ಇಲ್ಲಿಯ ವರೆಗೆ ಆ ನಿಟ್ಟಿನಲ್ಲಿ ಯಾವ ಪ್ರಯತ್ನಗಳು ಕಂಡುಬಂದಿಲ್ಲ ಎಂದು ಕೋರ್ಟ್ ಇದೇ ಸಂದರ್ಭದಲ್ಲಿ ವಿಷಾದವನ್ನು ವ್ಯಕ್ತಪಡಿಸಿತು.
ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ತರುವಂತೆ ಸಮುದಾಯಗಳು ಮುಂದೆ ಬರಬೇಕು ಎಂದು ಹೇಳುವುದು ಸಾಧ್ಯವಿಲ್ಲ. ಸಂವಿಧಾನವು ಈ ಕರ್ತವ್ಯವನ್ನು ಸರ್ಕಾರಕ್ಕೆ ಹೊರಿಸಿದೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತೆ ಮುಂದೂಡುತ್ತಲೆ ಹೋಗುವುದು ಸರಿಯಲ್ಲ ಎಂದು ನ್ಯಾಯಾಲಯ ಸರ್ಕಾರಕ್ಕೆ ಈ ಸಂಬಂಧ ನಿರ್ದೇಶನವನ್ನು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ