ನವದೆಹಲಿ: ದೆಹಲಿ ಅಬಕಾರಿ ಅಕ್ರಮ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಇಡಿ ಅಧಿಕಾರಿಗಳು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಅಬಕಾರಿ ಅಕ್ರಮ ಹಗರಣದ ಕಿಂಗ್ ಪಿನ್ ಕೇಜ್ರಿವಾಲ್ ಎಂದು ಇಡಿ ಹೇಳಿದೆ. ಕೇಜ್ರಿವಾಲ್ ವಿರುದ್ಧ ಹಲವು ಆರೋಪ ಮತ್ತು ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಒದಗಿಸಿದೆ. ದೆಹಲಿ ಅಬಕಾರಿ ನೀತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕೇಜ್ರಿವಾಲ್ ಸರ್ಕಾರ ಮಾಡಿತ್ತು. ಇದರಿಂದಾಗಿ ಅವರಿಗೆ ಕಿಕ್ ಬ್ಯಾಕ್ ಪಡೆಯಲು ಅನುಕೂಲವಾಗಿತ್ತು ಎನ್ನಲಾಗಿದೆ.
ಪ್ರಕರಣದಲ್ಲಿ ಕೇಜ್ರಿವಾಲ್ ಗೆ ವಿಜಯ್ ನಾಯರ್ ಎಂಬಾತ ಮಧ‍್ಯವರ್ತಿಯಾಗಿದ್ದು ಈತ ಕೇಜ್ರಿವಾಲ್ ಗೆ 100 ಕೋಟಿ ರೂ. ನೀಡಿದ್ದ. ಈತ ಕೇಜ್ರಿವಾಲ್ ಮನೆಯಲ್ಲಿಯೇ ಉಳಿದುಕೊಂಡು ಮದ್ಯದೊರೆಗಳಿಂದ ಲಂಚ ಪಡೆದು ಕೇಜ್ರಿವಾಲ್ ಗೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇದೇ ಹಣವನ್ನು ಕೇಜ್ರಿವಾಲ್ ಪಕ್ಷ ಪಂಜಾಬ್ ಮತ್ತು ಗೋವಾ ಚುನಾವಣೆ ವೆಚ್ಚಕ್ಕೆ ಬಳಸಿತ್ತು ಎಂಬ ಗಂಭೀರ ಆರೋಪವನ್ನೂ ಹೊರಿಸಲಾಗಿದೆ. 100 ಕೋಟಿ ಲಂಚದ ಪೈಕಿ 45 ಕೋಟಿ ರೂ.ಗಳನ್ನು 2021-22 ರ ಅವಧಿಯಲ್ಲಿ ಗೋವಾ ಚುನಾವಣೆಗೆ ವ್ಯಯಿಸಲಾಗಿತ್ತು. ಹಣ ಸ್ವೀಕರಿಸಿರುವುದನ್ನು ಗೋವಾ ಶಾಸಕರೂ ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಹಗರಣಗಳಲ್ಲಿ ಕೇಜ್ರಿವಾಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.