ನವದೆಹಲಿ: ಒಂದು ವೇಳೆ ನಿಮ್ಮ ಗಂಡಂದಿರು ಮೋದಿ ಮೋದಿ ಎಂದು ಜಪ ಮಾಡಿದರೆ ಅವರಿಗೆ ಊಟ ಬಡಿಸಬೇಡಿ ಎಂದು ಆಪ್ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಹಿಳೆಯರಿಗೆ ತಾಕೀತು ಮಾಡಿದ್ದಾರೆ!
ಅಲ್ಲದೆ, ಮಹಿಳೆಯರಿಗೆ ತನಗೆ ಮತ್ತು ಎಎಪಿ ಪಕ್ಷಕ್ಕೆ ಬೆಂಬಲಿಸುವುದಾಗಿ ಮಾತು ಕೊಡಿ ಎಂದೂ ಕೇಳಿಕೊಂಡಿದ್ದಾರೆ. ದೆಹಲಿಯಲ್ಲಿ ಮಹಿಳೆಯರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ 1,000 ರೂ. ನೀಡುವ ಸರ್ಕಾರೀ ಯೋಜನೆಯ ವಿತರಣಾ ಕಾರ್ಯಕ್ರಮದಲ್ಲಿ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಈ ಮಾತನಾಡಿದ್ದಾರೆ.
ಪುರುಷರು ಮೋದಿ ಹೆಸರನ್ನೇ ಜಪ ಮಾಡುತ್ತಿದ್ದಾರೆ. ನಿಮ್ಮ ಗಂಡ ಎಲ್ಲಾದರೂ ಆ ರೀತಿ ಮಾಡಿದರೆ ಅವರಿಗೆ ಈವತ್ತು ಊಟ ಬಡಿಸಲ್ಲ ಎನ್ನಿ. ಎಲ್ಲಾ ಮಹಿಳೆಯರು ತಮ್ಮ ಜೊತೆಗೆ ಕುಟುಂಬಸ್ಥರೂ ಎಎಪಿ ಮತ್ತು ನನಗೆ ಬೆಂಬಲಿಸುವುದಾಗಿ ಪ್ರಮಾಣ ಮಾಡಿ. ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ. ಯಾವತ್ತೂ ನಿಮಗೆ ಬೆಂಬಲವಾಗಿರುವುದು ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ ಎಂದಿದ್ದಾರೆ.
ನಿಮ್ಮ ಮನೆಯ ಗಂಡಸರಿಗೆ ಹೇಳಿ ನಾನು ಉಚಿತ ವಿದ್ಯುತ್ ನೀಡಿದ್ದೇನೆ, ಬಸ್ ಟಿಕೆಟ್ ನೀಡಿದ್ದೇನೆ, ಈಗ ಪ್ರತೀ ಮಹಿಳೆಗೆ ಮಾಸಿಕವಾಗಿ 1000 ರೂ. ನೀಡುತ್ತಿದ್ದೇನೆ. ಬಿಜೆಪಿ ಏನು ಮಾಡಿದೆ ಕೇಳಿ. ಬಿಜೆಪಿಗೆ ಯಾಕೆ ವೋಟ್ ಕೊಡಬೇಕು? ಈ ಬಾರಿ ಎಎಪಿಗೆ ವೋಟ್ ಕೊಡಿ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ವೈರಲ್ ಆಗಿದೆ.