ಕಾಲು ಮುರಿದಿದೆ, ಎದೆನೋವಾಗ್ತಿದೆ: ನಂದಿಗ್ರಾಮ ದಾಳಿ ಬಗ್ಗೆ ದೀದಿ ಆರೋಪ
ಗುರುವಾರ, 11 ಮಾರ್ಚ್ 2021 (10:54 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ನಿನ್ನೆ ಚುನಾವಣಾ ಪ್ರಚಾರ ವೇಳೆ ನಂದಿಗ್ರಾಮದಲ್ಲಿ ತಮ್ಮ ಮೇಲೆ 3-4 ದುಷ್ಕರ್ಮಿಗಳಿಂದ ದಾಳಿ ನಡೆದಿದೆ ಎಂದಿದ್ದ ಮಮತಾ ಆರೋಪಿಸಿದ್ದರು. ಈ ಘಟನೆಯಲ್ಲಿ ತಮ್ಮ ಕಾಲು ಮುರಿದಿದ್ದು, ಎದೆನೋವಾಗ್ತಿದೆ ಎಂದು ಮಮತಾ ಹೇಳಿಕೊಂಡಿದ್ದಾರೆ.
ನಂದಿಗ್ರಾಮದಲ್ಲಿ ಪ್ರಚಾರ ವೇಳೆ ಕೆಲವರು ತಳ್ಳಾಟ ನಡೆಸಿದ್ದಾರೆ. ಈ ವೇಳೆ ಮಮತಾ ಕಾಲು ಕಾರಿಗೆ ಬಡಿದು, ಗಾಯಗಳಾಗಿತ್ತು. ಆ ಬಳಿಕ ಮಮತಾ ಕೋಲ್ಕೊತ್ತಾಗೆ ಪ್ರಯಾಣ ಬೆಳೆಸಿದ್ದರು. ಇದು ತನ್ನ ವಿರುದ್ಧ ನಡೆದ ಉದ್ದೇಶಪೂರ್ವಕ ಸಂಚು ಎಂದು ಮಮತಾ ಆರೋಪಿಸಿದ್ದರು.
ಮಮತಾ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಆಕೆಯ ಕಾಲಿನ ಮೂಳೆ ಮುರಿತಕ್ಕೊಳಗಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಣ್ಣ ಪ್ರಮಾಣದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಉಸಿರಾಟದಲ್ಲೂ ಏರುಪೇರಾಗುತ್ತಿದೆ ಎಂದು ಸಿಎಂ ಮಮತಾ ಹೇಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಇದೆಲ್ಲವೂ ದೀದಿ ನಾಟಕ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ. ಜನರ ಸಹಾನುಭೂತಿ ಗಿಟ್ಟಿಸಿಕೊಳ್ಳಲು ಈ ರೀತಿ ನಾಟಕವಾಡುತ್ತಿದ್ದಾರೆ. ಸಿಎಂ ಭದ್ರತೆ ಪೊಲೀಸರ ಪಡೆಯೇ ಇದೆ. ಒಂದು ವೇಳೆ ಅವರ ಮೇಲೆ ದಾಳಿ ನಡೆದಿದ್ದರೆ, ಪೊಲೀಸರು ಸುಮ್ಮನಾಗಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.