ನವದೆಹಲಿ : ಸಾರ್ವತ್ರಿಕ ಚುನಾವಣೆ ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಂಡಿರುವ ಬಿಜೆಪಿ, ಸೀಟ್ ನಿಗದಿ ಸಂಬಂಧ ಆಂತರಿಕ ಕಸರತ್ತನ್ನು ತೀವ್ರಗೊಳಿಸಿದೆ. ಪಕ್ಷದಿಂದ ಟಿಕೆಟ್ ನೀಡಿಕೆಗೆ ಅರ್ಹತೆ, ಮಾನದಂಡ, ಅನುಸರಿಸಬೇಕಾದ ವಿಧಾನಗಳನ್ನ ಅಖೈರು ಮಾಡುವ ಸಂಬಂಧ ಮಹತ್ವದ ಸಭೆ ನಡೆಸಿದೆ.
ಹಾಲಿ ಸಂಸದರ ಕಾರ್ಯವೈಖರಿ, ರಿಪೋರ್ಟ್ ಕಾರ್ಡನ್ನ ಪರಿಶೀಲಿಸಿದೆ. ವಿವಿಧ ಏಜೆನ್ಸಿಗಳ ಮೂಲಕ ಕ್ಷೇತ್ರ ಮಾಹಿತಿ ತರಿಸಿಕೊಂಡು ಆಂತರಿಕ ಸಮೀಕ್ಷೆಗಳ ಜೊತೆ ತಾಳೆ ಹಾಕ್ತಿದೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವಾಗ ಕೇವಲ ಕಾರ್ಯವೈಖರಿಯನ್ನಷ್ಟೇ ನೋಡದೇ ಅವರ ವ್ಯಕ್ತಿತ್ವ, ಸೋಷಿಯಲ್ ಮೀಡಿಯಾದಲ್ಲಿ ಅವರಿಗಿರುವ ಫಾಲೋಯಿಂಗ್ ಸೇರಿ ಹಲವು ವಿಚಾರಗಳನ್ನ ಬಿಜೆಪಿ ಹೈಕಮಾಂಡ್ ಪರಿಶೀಲಿಸುತ್ತಿದೆ.
ಕಳೆದ ಬಾರಿ ಸೋತಿದ್ದ 166 ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ವಿಶೇಷ ತಂತ್ರ ರೂಪಿಸಿತ್ತು. ಈ ಬಾರಿ ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇಲ್ಲಿ ಹೆಚ್ಚು ಸ್ಥಾನ ಗಳಿಸಲು ಮೋದಿಯನ್ನು ಫೀಲ್ಡಿಗೆ ಇಳಿಸುವ ಬಗ್ಗೆ ಚಿಂತನೆ ನಡೆಸಿದೆ.