ನವದೆಹಲಿ : ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ರೀತಿಯಲ್ಲೇ ಉಪರಾಷ್ಟ್ರಪತಿ ಚುನಾವಣೆಗೂ ಒಮ್ಮತ ಅಭ್ಯರ್ಥಿ ಆಯ್ಕೆ ಮಾಡಲು ಚಿಂತಿಸಿದ್ದು,
ಈ ನಿಟ್ಟಿನಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇಡಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ ವಹಿಸಿ ವಿಪಕ್ಷಗಳ ಸಭೆ ಕರೆದಿದ್ದರು. ಬಳಿಕ ಯಶವಂತ್ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು.
ಈ ಹಿನ್ನೆಲೆ ಈ ಬಾರಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಇತರೆ ಪಕ್ಷದ ನಾಯಕರಿಗಿಂತ ಮುಂಚೆಯೇ ಎಚ್ಚೆತ್ತುಕೊಂಡಿದ್ದು ಅಭ್ಯರ್ಥಿ ಆಯ್ಕೆಯನ್ನು ತಾನೇ ನೇತೃತ್ವ ವಹಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಹಿರಿಯ ನಾಯಕ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಹೈಕಮಾಂಡ್ ಈ ಜವಾಬ್ದಾರಿ ನೀಡಿದ್ದು, ಇತರೆ ಪಕ್ಷಗಳ ಜೊತೆಗೆ ಮಾತುಕತೆ ನಡೆಸಲು ಸೂಚಿಸಿದೆ. ಈ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ಶೀಘ್ರದಲ್ಲಿ ವಿಪಕ್ಷಗಳ ಸಭೆ ಕರೆಯಲು ತಯಾರಿ ನಡೆಸಿದ್ದು, ಒಮ್ಮತದ ಅಭ್ಯರ್ಥಿಗಾಗಿ ಪ್ರಯತ್ನಗಳು ನಡೆಯಲಿದೆ.