ಸಾಂವಿಧಾನಿಕ ಪೀಠದ ಕಲಾಪಗಳ ಲೈವ್

ಬುಧವಾರ, 21 ಸೆಪ್ಟಂಬರ್ 2022 (12:00 IST)
ನವದೆಹಲಿ : ಮುಂದಿನ ವಾರದಿಂದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ನಡೆಯುವ ವಿಚಾರಣೆಯನ್ನು ಲೈವ್ ಆಗಿ ನೋಡಬಹುದು.

ಸೆ.27ರಿಂದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಕಲಾಪಗಳು ಲೈವ್ ಸ್ಟ್ರೀಮ್ ಆಗಲಿದೆ. ಆರಂಭದಲ್ಲಿ ಯೂಟ್ಯೂಬ್ನಲ್ಲಿ ಪ್ರಸಾರವಾದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲೇ ಲೈವ್ ಸ್ಟ್ರೀಮ್ ಪ್ರಸಾರವಾಗುವ ಸಾಧ್ಯತೆಯಿದೆ.

ಮಂಗಳವಾರ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಜಡ್ಜ್ಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಎಲ್ಲ ಜಡ್ಜ್ಗಳು ಲೈವ್ ಪ್ರಸಾರ ಅಗತ್ಯ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಭೆಯ ಬಳಿಕ ಲೈವ್ ಸ್ಟ್ರೀಮ್ ನಿರ್ಧಾರ ಪ್ರಕಟವಾಗಿದೆ.

ಈ ಆಗಸ್ಟ್ನಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪ ಲೈವ್ ಆಗಿತ್ತು. ಸಿಜೆಐ ಆಗಿದ್ದ ಎನ್ವಿ ರಮಣ ಅವರ ನಿವೃತ್ತಿ ದಿನದ ಕಲಾಪವನ್ನು ಲೈವ್ ಮಾಡಲಾಗಿತ್ತು.
ಸೆಪ್ಟೆಂಬರ್ 2018 ರಲ್ಲಿ ಸ್ವಪ್ನಿಲ್ ತ್ರಿಪಾಠಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ನ್ಯಾಯವನ್ನು ಪಡೆಯುವ ಹಕ್ಕಿನ ಭಾಗವಾಗಿ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರಕ್ಕೆ ಅನುಮತಿ ನೀಡಿತ್ತು.

ಬಳಿಕ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಇ-ಸಮಿತಿ, ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವನ್ನು ನಿಯಂತ್ರಿಸಲು ಮಾದರಿ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. 

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಕಳೆದ ವಾರ ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಸಾರ್ವಜನಿಕ ಮತ್ತು ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡುವಂತೆ ಮನವಿ ಮಾಡಿದ್ದರು.

ಗುಜರಾತ್, ಒಡಿಶಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ ಮತ್ತು ಮಧ್ಯಪ್ರದೇಶ ಹೈಕೋರ್ಟ್ಗಳು ತಮ್ಮ ಯೂಟ್ಯೂಬ್ ಚಾನೆಲ್ಗಳ ಮೂಲಕ ತಮ್ಮ ವಿಚಾರಣೆಗಳನ್ನು ಈಗಾಗಲೇ ಲೈವ್-ಸ್ಟ್ರೀಮ್ ಮಾಡಿ ವಿಚಾರಣೆ ನಡೆಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ