ವಿವಾದಿತ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾಗೆ ಮುಖಭಂಗ: ಆಯ್ಕೆ ಅನೂರ್ಜಿತಗೊಳಿಸಿದ ಯುಪಿಎಸ್‌ಸಿ

Sampriya

ಬುಧವಾರ, 31 ಜುಲೈ 2024 (18:06 IST)
Photo Courtesy X
ನವದೆಹಲಿ: 2022ನೇ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್‌ನ ವಿವಾದಿತ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್‌ ಅವರ ಆಯ್ಕೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಇಂದು ಅನೂರ್ಜಿತ ಮಾಡಿದೆ.

ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೂಜಾ ಅವರನ್ನು ಅಂಗವೈಕಲ್ಯ ಹಾಗೂ ಒಬಿಸಿ ಕೋಟಾ ದುರುಪಯೋಗದ ಆರೋಪದ ಮೇಲೆ ವರ್ಗಾವಣೆ ಮಾಡಲಾಗಿತ್ತು.

ಮಾತ್ರವಲ್ಲದೆ, ಪೂಜಾ ಅವರಿಗೆ ಆಯೋಗ ನಡೆಸುವ ಯಾವುದೇ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಇಲ್ಲ. ಈ ಕುರಿತು ಆಯೋಗ ಮಾಹಿತಿ ನೀಡಿರುವುದಾಗಿ ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ಪೂಜಾ ಖೇಡ್ಕರ್‌ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಪ್ರಕರಣ ದಾಖಲಿಸಿ ನಾಗರಿಕ ಸೇವಾ ಪರೀಕ್ಷೆ 2022ರ ನಿಯಮಗಳ ಅಡಿ ತನಿಖೆ ನಡೆಸಿತ್ತು. ತನಿಖೆಯಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ ಅವರನ್ನು ಅನೂರ್ಜಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

ಯುಪಿಎಸ್‌ಸಿಯ ಈ ಕ್ರಮದಿಂದ ಐಎಎಸ್ ಅಧಿಕಾರಿ ಪೂಜಾ ಇದೀಗ ಕೆಲಸ ಕಳೆದುಕೊಂಡು ಮುಖಭಂಗ ಅನುಭವಿಸಿದಂತಾಗಿದೆ.

ಪೂಜಾ ಅವರು ದುಷ್ಕೃತ್ಯದ ಮೂಲಕ ತಮಗೆ ಅನುಮತಿಸಿದ್ದ ಮಿತಿಯನ್ನು ಮೀರಿ ಹಲವು ಪ್ರಯತ್ನಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರ ನೇಮಕಾತಿಯನ್ನೇ ರದ್ದುಗೊಳಿಸುವಂತ ಗಂಭೀರ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಯೋಗ ಜುಲೈ 19ರಂದು ತಿಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ