ಫೆಂಗಲ್ ಚಂಡಮಾರುತ ಎಫೆಕ್ಟ್‌: ಹಲವು ವಿಮಾನಗಳ ಕಾರ್ಯಾಚರಣೆ ರದ್ದು

Sampriya

ಶನಿವಾರ, 30 ನವೆಂಬರ್ 2024 (14:44 IST)
ಚೆನ್ನೈ: ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿ ಫೆಂಗಲ್ ಚಂಡಮಾರುತ ರೂಪುಗೊಂಡಿದೆ. ಇದರಿಂದ ಉತ್ತರ ತಮಿಳುನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 12 ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ. ಸದ್ಯ ಮೆಟ್ರೊ ರೈಲು ಕಾರ್ಯನಿರ್ವಹಿಸುತ್ತಿದೆ. ‌ಚೆನ್ನೈನ ಎನ್ನೋರ್‌ನಲ್ಲಿ ಕಳೆದ 6 ಗಂಟೆಗಳಲ್ಲಿ 8 ಸೆಂ.ಮೀ ಮಳೆಯಾಗಿದೆ. ಅಣ್ಣಾ ನಗರದಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ.

ಚಂಡಮಾರುತ ಪುದುಚೇರಿಗೆ ಇಂದು ಅಪ್ಪಳಿಸುವ ಸಾಧ್ಯತೆಯಿದೆ. ಕಾರೈಕಲ್ ಮತ್ತು ಮಾಮಲ್ಲಪುರಂನಲ್ಲಿ ಭೂಕುಸಿತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶುಕ್ರವಾರ ರಾತ್ರಿಯಿಂದಲೇ ಕರಾವಳಿ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ವಿಪತ್ತು ನಿರ್ವಹಣೆಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ, ಮರೀನಾ ಮತ್ತು ಮಾಮಲ್ಲಪುರಂ ಸೇರಿದಂತೆ ಪ್ರಮುಖ ಬೀಚ್‌ಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸರ್ಕಾರ ಈಗಾಗಲೇ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ