ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆ

ಸೋಮವಾರ, 23 ಜನವರಿ 2017 (08:04 IST)
ಆಂಧ್ರ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37ಕ್ಕೇರಿದೆ.
ವಿಜಯನಗರಂ ಜಿಲ್ಲೆಯ ಕೂನೇರು ರೈಲು ನಿಲ್ದಾಣದ ಸಮೀಪ ಶನಿವಾರ ರಾತ್ರಿ ಜಗದಲ್‌‌ಪುರ್‌ ಮತ್ತು ಭುವನೇಶ್ವರ್‌ ಮಧ್ಯೆ ಸಂಚರಿಸುತ್ತಿದ್ದ ಹರಿಖಂಡ್‌ ಎಕ್ಸ್‌‌ಪ್ರೆಸ್‌‌ ಅಪಘಾತಕ್ಕೀಡಾಗಿತ್ತು. ಬರೊಬ್ಬರಿ 32 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನುಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ವಿಜಯನಗರಂ ಜಿಲ್ಲೆಯ ರಾಯಗಡ ಮತ್ತು ಪಾರ್ವತಿಪುರಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
 
ಈ ಪ್ರದೇಶದಲ್ಲಿ ನಕ್ಸಲೀಯರ ಹಾವಳಿ ಹೆಚ್ಚಿದ್ದು , ಅಪಘಾತದ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. 
 
ಕೇಂದ್ರ ರೈಲ್ವೇ ಇಲಾಖೆ ಪರಿಹಾರ ಘೋಷಣೆ ಮಾಡಿದ್ದು ಮೃತರ ಕುಟುಂಬಕ್ಕೆ ತಲಾ 2 ಲಕ್ಷ , ಗಂಭೀರ ಗಾಯಾಳುಗಳಿಗೆ 50 ಮತ್ತು ಅಲ್ಪ ಪ್ರಮಾಣದ ಗಾಯಗಳಾಗಿರುವವರಿಗೆ ತಲಾ 25 ಸಾವಿರ ರೂಪಾಯಿ ಘೋಷಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ಒಡಿಶಾದವರಾಗಿದ್ದಾರೆ. ರೈಲಿನ 13 ಬೋಗಿಗಳಿಗೆ ಯಾವುದೇ ಹಾನಿಯಾಗಿರಲಿಲ್ಲವಾದ್ದರಿಂದ ಪ್ರಯಾಣವನ್ನು ಮುಂದುವರೆಸಲಾಯ್ತು.
 
ಈಚಿನ ದಿನಗಳಲ್ಲಿ ಸಂಭವಿಸಿರುವ ಮೂರನೆಯ ರೈಲು ಅಪಘಾತ ಇದು.
 
ಅಪಘಾತ ವಿಧ್ವಂಸಕ ಕೃತ್ಯದಿಂದಾಯಿತೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಗೃಹ ಇಲಾಖೆ ರಾಷ್ಟ್ರೀಯ ತನಿಖಾದಳಕ್ಕೆ ಸೂಚಿಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ