ಲಕ್ನೋ: ಶನಿವಾರ ಸಂಜೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಉತ್ತರ ಪ್ರದೇಶದಾದ್ಯಂತ ಮಳೆ ಸಂಬಂಧಿತ ಘಟನೆಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಪರಿಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ಇಲಾಖೆಯ ಪ್ರಕಾರ, ಶುಕ್ರವಾರ ಸಂಜೆ 6:30 ರಿಂದ ಶನಿವಾರ ಸಂಜೆ 6:30 ರವರೆಗೆ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಾಜಿಪುರ ಜಿಲ್ಲೆಯಲ್ಲಿ ಹಾವು ಕಚ್ಚಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಉತ್ತರ ಪ್ರದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ಸರಾಸರಿ 7.3 ಮಿಮೀ ಮಳೆ ದಾಖಲಾಗಿದೆ.
75 ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಅಧಿಕ ಮಳೆ ದಾಖಲಾಗಿದ್ದು, ಹಮೀರ್‌ಪುರದಲ್ಲಿ ಗರಿಷ್ಠ 163.2 ಮಿಮೀ ಮಳೆಯಾಗಿದೆ.
ನದಿಗಳು ಅಪಾಯದ ಮಟ್ಟಕ್ಕೆ ಹರಿಯುತ್ತಿರುವ ಗೋರಖ್‌ಪುರ, ಸಿದ್ಧಾರ್ಥ್ ನಗರ ಮತ್ತು ಗೊಂಡಾ ಜಿಲ್ಲೆಗಳಲ್ಲಿ ಪರಿಹಾರ ಇಲಾಖೆ ಸ್ಥಳೀಯ ಆಡಳಿತವನ್ನು ಎಚ್ಚರಿಸಿದೆ.
"ಪ್ರತಿಕೂಲ ಹವಾಮಾನದಿಂದ ಉಂಟಾಗುವ ಯಾವುದೇ ರೀತಿಯ ಹಾನಿಯನ್ನು ತಗ್ಗಿಸಲು ನಾವು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಎಲ್ಲಾ ಘಟಕಗಳು ಸಿದ್ಧವಾಗಿವೆ ಮತ್ತು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿವೆ" ಎಂದು ರಾಜ್ಯ ಪರಿಹಾರ ಆಯುಕ್ತ ಜಿಎಸ್ ನವೀನ್ ಕುಮಾರ್ ಹೇಳಿದ್ದಾರೆ.