ಎಬಿವಿಪಿ ಕಾರ್ಯಕ್ರಮಕ್ಕೆ ಹೋಗಿದ್ದು ನಿಜಾನಾ: ಹೈಕಮಾಂಡ್ ಗರಂ ಆಗುವ ಮೊದಲೇ ಸ್ಪಷ್ಟನೆ ಕೊಟ್ಟ ಪರಮೇಶ್ವರ್

Krishnaveni K

ಗುರುವಾರ, 11 ಸೆಪ್ಟಂಬರ್ 2025 (15:45 IST)
ಬೆಂಗಳೂರು: ಗೃಹಸಚಿವ ಡಾ ಜಿ ಪರಮೇಶ್ವರ್ ಎಬಿವಿಪಿ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಆರ್ ಎಸ್ಎಸ್ ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಪರಮೇಶ್ವರ್ ವಿವಾದಕ್ಕೀಡಾಗಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಆರ್ ಎಸ್ಎಸ್ ಗೀತೆ ಹಾಡಿದ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಪರಮೇಶ್ವರ್ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರೆ ಸುಮ್ನೇ ಬಿಡ್ತಾರಾ?

ಈ ವಿಚಾರ ವಿವಾದವಾಗುತ್ತಿದ್ದಂತೇ ಟ್ವೀಟ್ ಮಾಡಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಸ್ಪಷ್ಟನೆ ಕೊಟ್ಟ ಪರಮೇಶ್ವರ್ ಹೈಕಮಾಂಡ್ ಗೂ ಸಂದೇಶ ರವಾನಿಸಿದ್ದಾರೆ. ‘ಕಳೆದ ಮಂಗಳವಾರ ದಿನ (ಸೆಪ್ಟೆಂಬರ್ 9) ತುರುವೇಕೆರೆ ಮತ್ತು ತಿಪಟೂರಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಿಪಟೂರು ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ಮುಗಿಸಿಕೊಂಡು, ಸಂಜೆ ತುಮಕೂರಿಗೆ ವಾಪಸ್ ಆಗುವಾಗ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಪುತ್ಥಳಿಯ ಮೆರವಣಿಗೆ ಹೋಗುತ್ತಿತ್ತು.

ರಾಣಿ ಅಬ್ಬಕ್ಕ ಅವರಿಗೆ ಹೂ ಸಮರ್ಪಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ, ಕಾರು ನಿಲ್ಲಿಸಿ ರಾಣಿ ಅಬ್ಬಕ್ಕ ಅವರ ಪುತ್ಥಳಿಗೆ ಗೌರವಾರ್ಥವಾಗಿ ಹೂ ಹಾಕಿ ಬಂದಿದ್ದೇನೆ. ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿಲ್ಲ’ ಎಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ